ಮಂಗಳವಾರ ಆರ್‌ಆರ್ ನಗರ-ಶಿರಾ ಉಪ ಚುನಾವಣೆ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ತಲ್ಲಣ- ತಳಮಳ

Update: 2020-11-09 15:53 GMT

ಬೆಂಗಳೂರು, ನ.9: ಬೆಂಗಳೂರಿನ ಆರ್.ಆರ್.ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಮಂಗಳವಾರ(ನ.10) ಪ್ರಕಟವಾಗಲಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ತಲ್ಲಣ, ತಳಮಳವನ್ನು ಸೃಷ್ಟಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರತಿಷ್ಠೆಯ ವಿಷಯವಾಗಿದ್ದು, ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ನಾಯಕತ್ವದ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕಾರಣಕರ್ತರಾದ ಶಾಸಕರ ಪೈಕಿ ಒಬ್ಬರಾಗಿದ್ದ ಮುನಿರತ್ನ, ಕಾಂಗ್ರೆಸ್ ತೊರೆದು, ಬಿಜೆಪಿಯಿಂದ ಕಣಕ್ಕಿಳಿದಿರುವುದರಿಂದ ಬಿಜೆಪಿ ಸರಕಾರಕ್ಕೆ ಈ ಕ್ಷೇತ್ರದ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹಾಲಿ ಶಾಸಕರಾಗಿದ್ದ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಅವರ ಪತ್ನಿ ಅಮ್ಮಾಜಮ್ಮ ಸ್ಪರ್ಧಿಸಿರುವುದರಿಂದ ದಳಪತಿಗಳಿಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಪ್ರಮುಖವಾಗಿದೆ. ಇವೆಲ್ಲದರ ನಡುವೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದಾಗಿರುವುದರಿಂದ, ಎರಡು ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ತಮ್ಮ ನೇತೃತ್ವದ ಶಕ್ತಿಯನ್ನು ಹೈಕಮಾಂಡ್‍ಗೆ ಮನದಷ್ಟು ಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ಶತಾಯಗತಾಯ ಮೂರು ಪಕ್ಷಗಳು ಈ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿವೆ.

ಮಂಗಳವಾರ ಪ್ರಕಟವಾಗಲಿರುವ ಈ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಮೂರು ಪಕ್ಷಗಳ ನಾಯಕತ್ವದ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವುದಂತು ಸುಳ್ಳಲ್ಲ. ಆರ್.ಆರ್.ನಗರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಮುನಿರತ್ನ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜೊತೆಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಈ ಕ್ಷೇತ್ರದಲ್ಲಿ ಡಿ.ಕೆ.ಸಹೋದರರ ಪ್ರಾಬಲ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗುತ್ತದೆ.

ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮೊದಲ ಪ್ರಯತ್ನದಲ್ಲೆ ವಿಧಾನಸಭೆ ಪ್ರವೇಶಿಸಲು ಯಶಸ್ವಿಯಾದಲ್ಲಿ, ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಡಿ.ಕೆ.ಸಹೋದರರ ಕೈ ಮೇಲಾಗುತ್ತದೆ. ಅಲ್ಲದೆ, ಜೆಡಿಎಸ್ ನಾಯಕರ ನಿದ್ದೆ ಗೆಡಿಸುತ್ತದೆ. ಶಿರಾದಲ್ಲಿ ಠೇವಣಿ ಸಿಗದೆ ಇರುವಂತಹ ಪರಿಸ್ಥಿತಿಯಲ್ಲಿರುವ ಬಿಜೆಪಿ ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಅದರ ಶ್ರೇಯ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಪಾಲಾಗಲಿದೆ. ಇದು ಬಿಜೆಪಿಯಲ್ಲಿ ಭವಿಷ್ಯದ ರಾಜ್ಯ ರಾಜಕಾರಣದ ನಾಯಕತ್ವದ ಮೇಲೂ ಪರಿಣಾಮ ಬೀರಲಿದೆ. ಅಂತಿಮವಾಗಿ ವಿಜಯದ ಅದೃಷ್ಟ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News