ಉಪಚುನಾವಣೆ ಫಲಿತಾಂಶಕ್ಕೂ ಮೊದಲೇ ಡಿಕೆಶಿ ಶಸ್ತ್ರ ತ್ಯಾಗ: ಸಚಿವ ಆರ್.ಅಶೋಕ್ ಲೇವಡಿ

Update: 2020-11-09 16:27 GMT

ಬೆಂಗಳೂರು, ನ. 9: `ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಫಲಿತಾಂಶಕ್ಕೂ ಮೊದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಸ್ತ್ರ ತ್ಯಾಗ ಮಾಡಿದ್ದಾರೆ. ಶಿವಕುಮಾರ್ ಆಟ ನಡೆಯುವುದಿಲ್ಲ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದ್ದು, ಮೂರು ರಾಜಕೀಯ ಪಕ್ಷಗಳ ಭವಿಷ್ಯ ತೀರ್ಮಾನವಾಗಲಿದೆ. ರಾಜರಾಜೇಶ್ವರಿನಗರ ಕ್ಷೇತ್ರದ ಉಸ್ತುವಾರಿ ನನಗೆ ಪಕ್ಷ ನೀಡಿತ್ತು. ನಾನು ಸುಮಾರು 25 ವರ್ಷ ಆ ಕ್ಷೇತ್ರದಲ್ಲಿ ಕಾರ್ಯಕರ್ತ, ಶಾಸಕ, ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ' ಎಂದು ಹೇಳಿದರು.

`ಉಪಚುನಾವಣೆ ಜನರು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಬೆಂಬಲಿಸಲಿದ್ದು, ಆ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಆಟಕ್ಕಿಂತ ಬಿಜೆಪಿ ಆಟ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 25-30 ಸಾವಿರ ಅಂತರದಲ್ಲಿ ಜಯ ಗಳಿಸಲಿದ್ದಾರೆ. ಶಿವಕುಮಾರ್ ಅವರು ನನ್ನ ಹೇಳಿಕೆಗಳಿಗೆ ಉತ್ತರ ನೀಡದೆ ಅಶೋಕಣ್ಣ ದೊಡ್ಡವರು ಎನ್ನುತ್ತಾರೆ' ಎಂದು ಲೇವಡಿ ಮಾಡಿದರು.

`ಬಿಜೆಪಿ ಅಭ್ಯರ್ಥಿ ಮುನಿರತ್ನ ನನ್ನ ಸರಿ ಸಮಾನ ಅಲ್ಲ ಎಂದು ಡಿಕೆಶಿ ಹೇಳಿದ್ದು, ಅವರು ಯಾವುದೇ ಅಭಿವೃದ್ಧಿ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿಲ್ಲ. ನಾನೇ ಇಲ್ಲಿ ಅಭ್ಯರ್ಥಿ ಎಂದು ಶಿವಕುಮಾರ್ ಹೇಳಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಕೂಡ ಅಭ್ಯರ್ಥಿ ಎಂದು ಪ್ರಚಾರ ಮಾಡಿದ್ದೇನೆ. ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋಲೊಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.

`ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಿಸುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಗಮನಿಸಿದರೆ ಅವರು ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ. ದೇವರು ಎಲ್ಲಿದ್ದಾನೆ ಎಂದು ಪ್ರಶ್ನಿಸುತ್ತಿದ್ದ ಸಿದ್ದರಾಮಯ್ಯರಿಗೆ ಹೊಸದಿಲ್ಲಿ ಸಂದೇಶ ಬಂದಿದ್ದು ಹೇಗೆ' ಎಂದು ಪ್ರಶ್ನಿಸಿದ ಅಶೋಕ್, `ಪ್ರತಿಪಕ್ಷ ನಾಯಕರಿಗೆ ಅಧಿಕಾರ ಹೋದ ಕಾರಣಕ್ಕೆ ಅವರು ಇನ್ನೂ ಅಧಿಕಾರದ ಭ್ರಮೆಯಲ್ಲೆ ಇದ್ದಾರೆ. ಫಲಿತಾಂಶದ ಬಳಿಕವೂ ಬಿಎಸ್‍ವೈ ಅವರೇ ನಮ್ಮ ನಾಯಕರು' ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News