×
Ad

ಭೂಸುಧಾರಣೆ ತಿದ್ದುಪಡಿಗೆ 2ನೆ ಬಾರಿಗೆ ತಂದಿರುವ ಸುಗ್ರೀವಾಜ್ಞೆ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್

Update: 2020-11-09 22:08 IST

ಬೆಂಗಳೂರು, ನ.9: ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರಕಾರ ತನ್ನ ನಿಲುವನ್ನು ಉಳಿಸಿಕೊಳ್ಳಲು 2ನೆ ಬಾರಿಗೆ ಸುಗ್ರೀವಾಜ್ಞೆ ಹೊರಡಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಸುಗ್ರೀವಾಜ್ಞೆ ಪ್ರಶ್ನಿಸಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ ಮೂಲ ಅರ್ಜಿದಾರ ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಅವರು, 2ನೆ ಬಾರಿಗೆ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆ ತಂದಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಅರ್ಜಿಗೆ ಡಿ.1ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. 

ಸರಕಾರ ಕಳೆದ 2ರಂದು ಜಾರಿಗೊಳಿಸಿದ ಸುಗ್ರೀವಾಜ್ಞೆ 1961ರ ಭೂ ಸುಧಾರಣೆ ಕಾಯ್ದೆಯ ಕಲಂ 79 (ಎ), (ಬಿ), (ಸಿ)ಗಳನ್ನು ತೆಗೆದು ಹಾಕಿತ್ತು. ಇದಲ್ಲದೇ ಕಲಂ 79ರ ಪ್ರಕಾರ ಉಲ್ಲಂಘನೆಯಾಗಿದ್ದ ಪ್ರಕರಣಗಳನ್ನು 1974ರಿಂದ ಪೂರ್ವಾನ್ವಯ ಆಗುವಂತೆ ವಿಲೇವಾರಿ ಮಾಡುವ ಕುರಿತು ಅಧಿಸೂಚನೆ ಹೊರಡಿಸಿದೆ.

ಭೂ ಖರೀದಿ ಮಿತಿ ನಿಗದಿಗೊಳಿಸುವ ಕಲಂ 63ರನ್ನು ಮುಂಚಿನಂತೆಯೇ ಉಳಿಸಿಕೊಂಡ ಸರಕಾರ, 2ನೆ ಬಾರಿ ಜಾರಿಗೊಳಿಸಿರುವ ಸುಗ್ರೀವಾಜ್ಞೆಯಲ್ಲಿ ಕಾರ್ಪೋರೇಟ್ ಕಂಪೆನಿಗಳು, ಟ್ರಸ್ಟ್ ಗಳು ಖರೀದಿಸುವ ಜಮೀನಿನ ಪ್ರಮಾಣಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಇದು ಪರೋಕ್ಷವಾಗಿ ಜಮೀನು ಕಬಳಿಕೆಯನ್ನು ಉತ್ತೇಜಿಸುತ್ತದೆ. ಅಷ್ಟೇ ಅಲ್ಲ ಸಂವಿಧಾನದ ಮೂಲ ಸ್ವರೂಪಕ್ಕೂ ಧಕ್ಕೆ ತರುವಂಥದ್ದಾಗಿದೆ ಎಂದು ತಿದ್ದುಪಡಿ ಅರ್ಜಿಯಲ್ಲಿ ವಿವರಿಸಲಾಗಿದೆ.

ಇದೇ ಪ್ರಕರಣದಲ್ಲಿ ತಿದ್ದುಪಡಿ ಅರ್ಜಿಗಳನ್ನು ಸಲ್ಲಿಸಲು ನ್ಯಾಯಪೀಠ ಇತರ ಅರ್ಜಿದಾರರಿಗೂ ಅನುಮತಿ ನೀಡಿ, ಡಿ.1ರೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಸರಕಾರಕ್ಕೆ ಸೂಚಿಸಿತು. ಮೂಲ ದಾವೆದಾರ ಹೊಂಗಲ್ ಪರ ನ್ಯಾಯವಾದಿ ಶಂಕರ್ ಭಟ್ ಹಾಗೂ ರವೀಂದ್ರ ಡಿ.ಕೆ. ಅವರು ವಕಾಲತ್ತು ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News