ಕಾರ್ಮಿಕ, ರೈತ, ಜನವಿರೋಧಿ ನೀತಿ ವಿರುದ್ಧ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ

Update: 2020-11-09 16:54 GMT

ಮಂಡ್ಯ, ನ.9: ಕೇಂದ್ರ ಸರಕಾರದ ಕಾರ್ಮಿಕ, ರೈತ, ಜನವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಮಂಡ್ಯದಲ್ಲೂ ಬೃಹತ್ ಪ್ರತಿಭಟನೆ ನಡೆಯಿತು.

ಅಂಗನವಾಡಿ, ಬಿಸಿಯೂಟ ನೌಕರರು, ಕಾರ್ಮಿಕರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿ ತಂದು ಸಂಸತ್ತಿನಲ್ಲಿ ನಾಲ್ಕು ಸಂಹಿತೆಗಳಾಗಿ ರೂಪಿಸುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿ ಅವರನ್ನು ಗುಲಾಮಿಗಿರಿಯ ಪರಿಸ್ಥಿತಿಗೆ ತಳ್ಳಿದೆ. ರೈತ ವಿರೋಧಿಯಾಗಿ ಕೃಷಿಯನ್ನು ಕಂಪನಿಗಳ ಕೈಗೆ ನೀಡುವ ಕಾಯ್ದೆಗಳನ್ನು ರೂಪಿಸಿ ಅನ್ನದಾತರ ಬದುಕನ್ನು ನಾಶಮಾಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ವಿರೋಧಿಯಾದ ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ರೈತ ವಿರೋಧಿ ಕೃಷಿ ಸಂಬಂಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಶಿಕ್ಷಣ, ಆರೋಗ್ಯ, ರೈಲ್ವೆ, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಆದಾಯ ತೆರಿಗೆ ವ್ಯಾಪ್ತಿಗ ಬಾರದ ಕುಟುಂಬಗಳಿಗೆ ಮಾಸಿಕ 7.50 ಸಾವಿರ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಬಡವರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಬೇಕು. ಉದ್ಯಾಗಿ ಖಾತ್ರಿ ಯೋಜನೆಡಿ ಕೆಲಸ ನೀಡಬೇಕು. ಕೂಲಿಯನ್ನು ಕನಿಷ್ಠ 600 ರೂ.ಗೆ ಹೆಚ್ಚಿಸಬೇಕು.  21 ಸಾವಿರ ಸಮಾನ ಕನಿಷ್ಠ ವೇತನ ನಿಗದಿ ಮಾಡಬೇಕು. ಗುತ್ತಿಗೆ ಕಾರ್ಮಿಕರ ಖಾಯಂಗೆ ಅಸ್ಸಾಂ, ತಮಿಳುನಾಡು ಮಾದರಿ ಶಾಸನ ರೂಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಶಾಸನ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ನೂತನ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸುವಾಗ ಬಿಸಿಯೂಟ ಯೋಜನೆ ಬಲಿಷ್ಠಪಡಿಸಿ ಮುಂದುವರಿಸಬೇಕು. ಕೇಂದ್ರೀಕೃತ ಅಡುಗೆ ಮಾದರಿ ಬೇಡ, ಯಾವುದೇ ಖಾಸಗೀ ಸಂಸ್ಥೆಗಳಿಗೆ ಜವಾಬ್ಧಾರಿ ಬೇಡ. ಬಿಸಿಯೂಟ, ಅಂಗನವಾಡಿ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಬೇಕು. ಅಡುಗೆ ತಯಾರಿಗೆ ಖಾಸಗೀ ಸಂಸ್ಥೆಗಳಿಗೆ ವಹಿಸಬಾರದು. ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಬೇಕು ಎಂದೂ ಅವರು ಒತ್ತಾಯಿಸಿದರು.

ಸಿಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮಹದೇವಮ್ಮ, ಪುಟ್ಟಮ್ಮ, ಕೆ.ಎಸ್.ಸುನೀತಾ, ಸುನಂದ, ಸಿ.ಸಿ.ಮಂಜುಳ, ನೂರ್ ಫಾತಿಮಾ, ಅಂಗನವಾಡಿ ನೌಕರರ ಸಂಘದ ಪ್ರಮೀಳಕುಮಾರಿ, ಜಯಲಕ್ಷ್ಮಮ್ಮ, ಇತರ ಮುಖಂಡರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News