ಶಿಕಾರಿಪುರ ಪುರಸಭೆ ಬಿಜೆಪಿ ಮಡಿಲಿಗೆ: ಅಧ್ಯಕ್ಷರಾಗಿ ಲಕ್ಷ್ಮೀ, ಉಪಾಧ್ಯಕ್ಷರಾಗಿ ಸಾದಿಕ್ ಆಯ್ಕೆ

Update: 2020-11-09 17:01 GMT

ಶಿವಮೊಗ್ಗ, ನ.09: ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರ ಪುರಸಭೆ ಬಿಜೆಪಿ ಮಡಿಲಿಗೆ ಬಂದಿದೆ. ಪುರಸಭೆ ಅಧ್ಯಕ್ಷರಾಗಿ ಲಕ್ಷ್ಮೀ ಮಹಲಿಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಸಾದಿಕ್ ಆಯ್ಕೆಯಾದರು.

ಲಕ್ಷ್ಮೀ ಮಹಾಲಿಂಗಪ್ಪ ಮತ್ತು ಸಾದಿಕ್ ಗೆ ತಲಾ 12 ಮತಗಳು ಲಭ್ಯವಾದರೆ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕಮಲಮ್ಮ ಹಾಗೂ ಉಪಾಧ್ಯಕ್ಷ ಸ್ಥಾನದ ದಸ್ತಗಿರಿ ಅವರಿಗೆ 9 ಮತಗಳು ಲಭ್ಯವಾಗಿದೆ.

ಈಗಾಗಲೇ ಶಿಕಾರಿಪುರ ಪುರಸಭೆಯಲ್ಲಿ 23 ಸದಸ್ಯ ಬಲವಿದ್ದು, ಇದರಲ್ಲಿ ಬಿಜೆಪಿ 8, ಕಾಂಗ್ರೆಸ್ 12 ಜನ ಮತ್ತು ಪಕ್ಷೇತರರು ಮೂವರಿದ್ದರು. ಈ ನಡುವೆ ಕಾಂಗ್ರೆಸ್ ನ ಮೂವರು ಸದಸ್ಯರು ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ, ಆ ಪಕ್ಷದ ಬಲ 9ಕ್ಕೆ ಕುಸಿಯಿತು. 

ಬಿಜೆಪಿಗೆ ಮೂವರು ಸದಸ್ಯರು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದರ ಬಲ 11ಕ್ಕೆ ಏರಿತು. ಸಂಸದ ಬಿ.ವೈ.ರಾಘವೇಂದ್ರ ಸಹ ಇಂದು ನಡೆದ ಮತದಾನದಲ್ಲಿ ಪಾಲ್ಗೊಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸದ ಬಿ.ವೈ.ರಾಘವೇಂದ್ರ ಅಭಿನಂದಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಶ್ರಮಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News