ದಲಿತ ಯುವತಿಯ ಹತ್ಯೆ ಪ್ರಕರಣ: ಆರೋಪಿಗಳ ಬಂಧನ, ಡಿವೈಎಸ್ಪಿ ಅಮಾನತಿಗೆ ಒತ್ತಾಯಿಸಿ ಧರಣಿ
ಮಂಡ್ಯ, ನ.9: ಮಳವಳ್ಳಿ ತಾಲೂಕು ನಂಜೇಗೌಡನದೊಡ್ಡಿ ಗ್ರಾಮದ ದಲಿತ ಯುವತಿ ಮೇಘಶ್ರೀ ‘ಮರ್ಯಾದೆ ಹತ್ಯೆ’ ಮಾಡಿದ್ದಾರೆನ್ನಲಾದ ಪಾಂಡವಪುರ ತಾಲೂಕು ತಿರುಮಲಾಪುರದ ಟಿ.ಕೆ.ಸ್ವಾಮಿ ಮತ್ತು ಅವರ ಕುಟುಂಬದವರ ಬಂಧಿಸಿ ತನಿಖೆ ನಡೆಸಲು ವಿಳಂಬ ಮಾಡುತ್ತಿರುವ ಜಿಲ್ಲಾಡಳಿತದ ವೈಫಲ್ಯ ಖಂಡಿಸಿ ಹಾಗೂ ಶ್ರೀರಂಗಪಟ್ಟಣ ಡಿವೈಎಸ್ಪಿ ಅರುಣ್ ನಾಗೇಗೌಡ ಅಮಾನತಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಗೃಹ ಸಚಿವ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಮಳವಳ್ಳಿ ತಾಲೂಕು ನಂಜೇಗೌಡನದೊಡ್ಡಿ ಗ್ರಾಮದ ಪರಿಶಿಷ್ಠ ಜಾತಿಯ ಮಹಾದೇವಯ್ಯ, ಮಹಾದೇವಮ್ಮ ದಂಪತಿ ಪುತ್ರಿ ಮೇಘಶ್ರೀಯನ್ನು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪಾಂಡವಪುರ ತಾಲೂಕು ತಿರುಮಲಾಪರುದ ಟಿ.ಕೆ.ಸ್ವಾಮಿ ಪ್ರೀತಿಸಿ ಮದುವೆಯಾಗಿದ್ದಾನೆ. ಮೇಘಶ್ರೀ ಜಾತಿ ತಿಳಿದು ಸ್ವಾಮಿ ಕುಟುಂಬದವರು ಆಕೆಯನ್ನು ಕೊಲೆ ಮಾಡಿ ಕಾಲುವೆಗೆ ಬಿಸಾಡಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸಂಬಂಧ ಮೇಘಶ್ರೀ ತಂದೆ ತಾಯಿ ಪಾಂಡವಪುರ ಠಾಣೆ ಮತ್ತು ಶ್ರೀರಂಗಪಟ್ಟಣದ ಡಿವೈಎಸ್ಪಿಗೆ ದೂರು ನೀಡಿದ್ದಾರೆ. ಆದರೆ, ಆರೋಪಿ ಸ್ವಾಮಿ ಕುಟುಂಬದವರನ್ನು ಬಂಧಿಸಿಲ್ಲ. ಆರೋಪಿಗಳು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ ಎಂದು ಅವರು ದೂರಿದರು.
ಆರೋಪಿಗಳನ್ನು ಕೂಡಲೇ ಬಂಧಿಸಿ ತನಿಖೆ ನಡೆಸಿ ಮೇಘಶ್ರೀ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಡಿವೈಎಸ್ಪಿ ಅರುಣ್ ನಾಗೇಗೌಡ ಅಮಾನತುಪಡಿಸಬೇಕು. ತನಿಖೆಯನ್ನು ಜಿಲ್ಲಾ ಅಪರ ಅಧೀಕ್ಷರ ನೇತೃತ್ವದಲ್ಲಿ 5 ಮಂದಿ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಬೇಕು. ಮೇಘಶ್ರೀ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಬೇಕು. ರಾಜ್ಯಾದ್ಯಂತ ಮರ್ಯಾದೆ ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತ ಸಂಘದ ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಣ್ಣ, ಚಂದ್ರಶೇಖರ್ ಹೆಮ್ಮಿಗೆ, ದಸಂಸ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್, ಸಂತೋಷ್ ಕುಮಾರ್, ಪವನ್ ಕುಮಾರ್, ದೇವರಾಜು, ಮಹದೇವಪ್ಪ, ಹುರುಗಲವಾಡಿ ರಾಮಯ್ಯ, ಇತರ ಪ್ರಗತಿಪರ ಸಂಘಣೆಗಳು ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.