ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಆನ್‍ಲೈನ್ ನೋಂದಣಿ ಕಡ್ಡಾಯ

Update: 2020-11-09 17:27 GMT

ಬೆಂಗಳೂರು, ನ. 9: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಶಬರಿಮಲೆ ಯಾತ್ರೆ ಕೈಗೊಳ್ಳಲು ಯಾತ್ರಾರ್ಥಿಗಳು/ಭಕ್ತರು ಕಡ್ಡಾಯವಾಗಿ ದೇವಳದ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳುವವರಿಗೆ ಅನುಮತಿಸಿದ ನಂತರವೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸೂಚಿಸಲಾಗಿದೆ.

ಪ್ರತಿದಿನ ಒಂದು ಸಾವಿರ ಯಾತ್ರಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾರಾಂತ್ಯದಲ್ಲಿ ಪ್ರತಿದಿನ ಎರಡು ಸಾವಿರ ಹಾಗೂ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶಬರಿಗೆ ಭೇಟಿ ನೀಡುವ 48 ಗಂಟೆ ಅವಧಿಗೆ ಮುನ್ನ ಕೋವಿಡ್-19 ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ ಎಂದು ನಿರ್ದೇಶಿಸಲಾಗಿದೆ.

ಶಬರಿಮಲೈ ಪ್ರವೇಶ ಸ್ಥಳದಲ್ಲಿ ಆಂಟಿಜನ್ ಟೆಸ್ಟ್ ವ್ಯವಸ್ಥೆ ಮಾಡಲಾಗಿದ್ದು, ಇದರ ವೆಚ್ಚವನ್ನು ಭಕ್ತರೇ ಭರಿಸಬೇಕು. 10 ವರ್ಷಕ್ಕೊಳಪಟ್ಟು ಮತ್ತು 60ರಿಂದ 65 ವರ್ಷ ಮೇಲ್ಪಟ್ಟವರು ಹಾಗೂ ಕಾಯಿಲೆ ಲಕ್ಷಣಗಳಿರುವ ಇರುವಂತವರಿಗೆ ಯಾವುದೇ ಕಾರಣಕ್ಕೂ ಅನುಮತಿ ಇರುವುದಿಲ್ಲ. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಸೇರಿದಂತೆ ಇತ್ಯಾದಿ ಕಾರ್ಡ್ ಹೊಂದಿರುವವರು ಯಾತ್ರೆಗೆ ತೆರಳುವ ಸಂದರ್ಭದಲ್ಲಿ ತಮ್ಮ ಬಳಿ ಇಟ್ಟುಕೊಳ್ಳಬೇಕು.

ತುಪ್ಪದ ಅಭಿಷೇಕ, ಪಂಪಾನದಿ ಸ್ನಾನ, ಸನ್ನಿಧಾನದಲ್ಲಿ ರಾತ್ರಿ ತಂಗುವುದು ಹಾಗೂ ಪಂಪಾ ಮತ್ತು ಗಣಪತಿ ಕೋವಿಲ್‍ಗೆ ಅವಕಾಶವಿರುವುದಿಲ್ಲ. ಯಾತ್ರಾತ್ರಿಗಳ ಪ್ರಯಾಣಕ್ಕೆ ಏರುಮೇಲು ಮತ್ತು ವೇದಸಾರಿಖರ ಮಾರ್ಗದಲ್ಲಿ ಮಾತ್ರ ಅವಕಾಶವಿರುತ್ತದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News