ಕಸ್ತೂರಿ ರಂಗನ್ ವರದಿ ಸೇರಿ ವಿವಿಧ ಅರಣ್ಯ ಯೋಜನೆ ಜಾರಿ ವಿರೋಧಿಸಿ ಖಾಂಡ್ಯ ಹೋಬಳಿ ಬಂದ್ ಯಶಸ್ವಿ

Update: 2020-11-09 17:34 GMT

ಬಾಳೆಹೊನ್ನೂರು, ನ.9: ಭದ್ರಾ ಹುಲಿ ಯೋಜನೆ, ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮ ವಲಯ ಯೋಜನೆಗಳು ಮಲೆನಾಡಿಗೆ ಮಾರಕವಾಗಿದ್ದು, ಸರಕಾರ ಈ ಯೋಜನೆಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಸೋಮವಾರ ಖಾಂಡ್ಯ ಹೋಬಳಿ ನಾಗರಿಕ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಹೋಬಳಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. 

ಹೋಬಳಿ ವ್ಯಾಪ್ತಿಯ ದೇವದಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಬಗೆರೆಯಲ್ಲಿ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ವತಿಯಿಂದ ಕಡಬಗೆರೆಯ ಗಾಂಧಿ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಬಂದ್ ಅಂಗವಾಗಿ ದೇವದಾನ ಗ್ರಾಪಂ ಎದುರು ಜಮಾಯಿಸಿದ್ದ ಸಾವಿರಾರು ಪ್ರತಿಭಟನಾಕಾರರು ಸರಕಾರದ ಮಾರಕ ಯೋಜನೆಗಳಾದ ಹುಲಿಯೋಜನೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಬಫರ್ ಝೋನ್ ಯೋಜನೆಗಳ ವಿರುದ್ದ ಸಂಗಮೇಶ್ವರಪೇಟೆಯಿಂದ ಕಡಬಗೆರೆ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ರೈತರು ಸೇರಿದಂತೆ, ಪಕ್ಷ ಬೇಧ ಮರೆತು ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗಿಯಾಗಿದ್ದರು.

ಈ ವೇಳೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಮಾಜಿ ಶಾಸಕ ಡಿ.ಎನ್ ಜೀವರಾಜ್, ಹಸಿರು ಪೀಠಕ್ಕೆ ಸಲ್ಲಿಸಿದ  ವರದಿಯನ್ನು ಹಿಂಪಡೆದು ಪುನಃ ಗ್ರಾಮ ಸಭೆಗಳಲ್ಲಿ ನಿರ್ಣಯ ಕೈಗೊಂಡು ವರದಿ ಸಲ್ಲಿಸುವ ಬಗ್ಗೆ ಮುಖ್ಯಮಂತ್ರಿ ರೈತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಕೋವಿಡ್19 ಲಾಕ್ ಡೌನ್ ವೇಳೆಯಲ್ಲಿ ಎನ್‍ಜಿಒ ಗಳು ಸುಪ್ರೀಂ ಕೋರ್ಟಿಗೆ ಆಕ್ಷೇಪ ಸಲ್ಲಿಸಿದ ಪರಿಣಾಮವಾಗಿ ಈ ಸಮಸ್ಯೆ ಉಂಟಾಗಿದೆ. ಈ ಹಿಂದೆ ಗೋವಾ ಫೌಂಡೇಷನ್ ಜೊತೆಗೆ ಜೈರಾಮ ರಮೇಶ್ ಈ ಯೋಜನೆಗಳ ಬಗ್ಗೆ ವರದಿ ಸಲ್ಲಿಸಲು ಮಾಧವ್ ಗಾಡ್ಗಿಲ್‍ರವರನ್ನು ಸೂಚಿಸಿದ್ದು, ನಂತರ ವರದಿಯಲ್ಲಿನ ತಪ್ಪನ್ನು ಸರಿಪಡಿಸಲು ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇಮಕ ಮಾಡಿದೆ. ವರದಿಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ಆದೇಶ ಮಾಡಿರಲಿಲ್ಲ ಎಂದರು.

ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 7 ಹುಲಿ ಯೋಜನೆಗಳನ್ನು ಜಾರಿಗೆ ತರಲು ಸಿದ್ದತೆ ನಡೆದಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿ ಭದ್ರಾ ಹಾಗೂ ಕುದುರೆಮುಖ ಹುಲಿಯೋಜನೆಯಿಂದಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಯೋಜನೆಗಳನ್ನು ಕೈಬಿಡಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸೂಕ್ಷ್ಮ ವಲಯದ ವಿಸ್ತರಣೆ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ಇದೀಗ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಪ್ರತಿ ತಾಲೂಕು, ಹೋಬಳಿ ಕೇಂದ್ರಕ್ಕೆ ಈ ಅಧಿಕಾರಿಗಳು ತೆರಳಿ ರೈತರ ಆಕ್ಷೇಪಣೆಗಳನ್ನು ಪಡೆಯಲು ಸೂಚಿಸಿದ್ದಾರೆ. ಎಲ್ಲಾ ರೈತರು ಅಧಿಕಾರಿಗಳು ನಿಗದಿಪಡಿಸಿದ ದಿನಾಂಕದಂದು ಸೂಚಿಸಿದ ಸ್ಥಳದಲ್ಲಿ ಆಕ್ಷೇಪಣೆ ಸಲ್ಲಿಸಿಬೇಕೆಂದರು.

ಇದರಲ್ಲಿ ರಾಜಕೀಯ ಕೆಸೆರೆಚಾಟ ಬಿಟ್ಟು ಪಕ್ಷಾತೀತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಮಸ್ಯೆಯ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗುವುದೆಂದು ತಿಳಿಸಿದ್ದಾರೆ ಎಂದು ಹೇಳಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಸಮಸ್ಯೆ ಉಲ್ಬಣಗೊಂಡಿದೆ. ಅರಣ್ಯ ಹಕ್ಕು ಖಾಯಿದೆಯಂತೆ ಗ್ರಾಮ ಸಭೆಗಳನ್ನು ನಡೆಸದೆ ಅಧಿಕಾರಿಗಳು ವರದಿಯನ್ನು ಸಿದ್ದಪಡಿಸಿ ಹಸಿರು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ. ವಾಸ್ತವಾಂಶ ಅರಿಯದೆ ಬೇರೆ ರಾಜ್ಯದಿಂದ ಬಂದ ಅಧಿಕಾರಿಗಳು ಎನ್‍ಜಿಓ ಗಳ ಒತ್ತಡಕ್ಕೆ ಮಣಿದು ಸಮಸ್ಯೆಯನ್ನುಂಟುಮಾಡಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ. ಅರಣ್ಯ ಸಚಿವರು ಜಿಲ್ಲೆಗೆ ಬರುವಂತೆ ಅಹ್ವಾನಿಸಿದ್ದು, ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವ ಬಗ್ಗೆ ರೈತರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ನಮ್ಮ ನಮ್ಮ ತಪ್ಪಿನ ಪ್ರತಿಫಲವಾಗಿ ಈ ಯೋಜನೆ ಜಾರಿಯಾಗುತ್ತಿದೆ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಹೋರಾಟಗಳು ವೈಯುಕ್ತಿಕ ಪ್ರತಿಷ್ಟೆಯಾಗದೆ ನಿರಂತರ  ಪ್ರತಿಭಟನೆ ನಡೆಯಬೇಕೆಂದು ತಿಳಿಸಿದರು.

ಮಾಜಿ ವಿದಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಗ್ರಾ.ಪಂ. ತಾ.ಪಂ. ಜಿ.ಪಂ ಮಟ್ಟದಲ್ಲಿ ಸಭೆ ನಡೆಯದೆ ಅಧಿಕಾರಿಗಳು ವರದಿ ಸಲ್ಲಿಸಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿದರು. 

ನಾಗರಿಕ ಹೋರಾಟ ವೇದಿಕೆಯ ಎಂ.ಜೆ.ಚಂದ್ರಶೇಖರ್ ಮಾತನಾಡಿ, ಮಾಗುಂಡಿ ಹಾಗೂ ಹುಯಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಪವಲಯ ಅರಣ್ಯಾಧಿಕಾರಿಯೋರ್ವರು 700ಕ್ಕೂ ಹೆಚ್ಚು ರೈತರಿಂದ ಅರಣ್ಯಕ್ಕೆ ತೆರಳುವುದಿಲ್ಲವೆಂದು ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡಿದ್ದು, ಈ ಅಧಿಕಾರಿಯನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಖಾಂಡ್ಯ ಹೋಬಳಿಯ ಬಿ.ಎನ್.ಸೊಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಕೆ.ಎಲ್.ಚಂದ್ರೇಗೌಡ, ಉದಯಕುಮಾರ್ ಹಗ್ಡೆ, ಡಿ.ಎಸ್.ಎಸ್.ನ ಸುಂದರೇಶ್, ಪುಣ್ಯಪಾಲ್, ಜಿ.ಪಂ.ಸದಸ್ಯೆ ಕವಿತಾ ಲಿಂಗರಾಜ್, ಸಚಿನ್ ಮೀಗಾ, ಡಾ.ಅಂಶುಮಂತ್, ಶಿವಶಂಕರ್, ಖಾಂಡ್ಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ವಿ.ಶಂಕರ್, ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿದರು.

ಪ್ರತಿಭಟನೆ ಅಂಗವಾಗಿ ಸಂಗಮೇಶ್ವರಪೇಟೆ ಹಾಗೂ ಕಡಬಗೆರೆ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಇದೇ ವೇಳೆ ಪ್ರತಿಭಟನಾಕಾರರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮುದರ ಪೂಜಾರಿ, ದಾನಿಹಳ್ಳಿ ಮಂಜುನಾಥ್, ಯು.ಸಿ.ಗೊಪಾಲಗೌಡ, ಹೆಚ್.ಎಸ್.ರವಿ, ಕಲ್ಮಕ್ಕಿ ಉಮೇಶ್, ಮಹಮ್ಮದ್ ಹನೀಪ್, ಜಿ.ಪಂ.ಮಾಜಿ ಅಧ್ಯಕ್ಷೆ ಸವಿತಾ ರಮೇಶ್, ಗುರುಮೂರ್ತಿ, ಜಯಶೀಲ, ಸುಚಿತ್ರ, ಗಣೇಶ್ ಪೂಜಾರಿ  ಸೇರಿದಂತೆ ಎರಡು ಸಾವಿಕ್ಕೂ ಹೆಚ್ಚು ರೈತರು ಕೂಲಿ ಕಾರ್ಮಿಕರು ಭಾಗವಹಿಸಿದ್ದರು. ಅಧ್ಯಕ್ಷ ಎಸ್.ಬಿ.ಶಂಕರ್, ದಲಿತ ಸಂಘರ್ಷ ಸಮಿತಿ ಮುಖಂಡ ಸುಂದರೇಶ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News