ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭೆ ಸ್ಥಾನಕ್ಕೆ ಡಿ.1ರಂದು ಚುನಾವಣೆ

Update: 2020-11-10 13:04 GMT

ಬೆಂಗಳೂರು, ನ. 10: ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿಸೆಂಬರ್ 1ಕ್ಕೆ ಉಪಚುನಾಚಣೆ ನಡೆಯಲಿದ್ದು, ನಾಳೆ(ನ.11)ಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ(ಪ್ರಭಾರ) ಹಾಗೂ ಚುನಾವಣಾಧಿಕಾರಿಯೂ ಆಗಿರುವ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆಯ ಚುನಾಯಿತ(ಶಾಸಕರು) ಸದಸ್ಯರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಡಿಸೆಂಬರ್ 1ರಂದು ಉಪಚುನಾವಣೆ ನಡೆಯಲಿದೆ. ನಾಳೆಯಿಂದ ನ.18ರವರೆಗೂ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ನ.19ರ ಬೆಳಗ್ಗೆ 11ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ನ.23ರ ವರೆಗೆ ಕಾಲಾವಕಾಶವಿದೆ.

ಅವಶ್ಯವಿದ್ದಲ್ಲಿ ಡಿಸೆಂಬರ್ 1ರಂದು ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ-106ರಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ವಿಧಾನಸಭೆಗೆ ಚುನಾಯಿತಗೊಂಡಿರುವ 222 ಮಂದಿ ಶಾಸಕರು ಮತದಾರರಾಗಿದ್ದಾರೆ. ಕೋವಿಡ್-19ರ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಹಿಸಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯಸಭಾ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಗರಿಷ್ಠ ಇಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾಧಿಕಾರಿಯ ಕಚೇರಿ ಸಂಪರ್ಕಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ನಿಂದ ಕೈಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗುವುದು, ವ್ಯಕ್ತಿಗತ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಇದೇ ವೇಳೆ ವಿವರಿಸಿದರು.

ರಾಜ್ಯಸಭೆಗೆ ಚುನಾಯಿತರಾಗಿದ್ದ ರಾಯಚೂರು ಮೂಲದ ಅಶೋಕ್ ಗತ್ತಿ ಅವರು ಸೆಪ್ಟೆಂಬರ್ 17ರಂದು ಕೋವಿಡ್-19 ಸೋಂಕಿನಿಂದ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News