ಖತರ್: ಮನೆ, ಆಸ್ತಿ ಖರೀದಿಗೆ ವಿದೇಶೀಯರ ಓಲೈಕೆ

Update: 2020-11-11 15:18 GMT

ದೋಹಾ (ಖತರ್), ನ. 11: ಖತರ್‌ನಲ್ಲಿ ಮನೆ ಮತ್ತು ಆಸ್ತಿಗಳನ್ನು ಖರೀದಿಸಲು ಅಲ್ಲಿನ ಸರಕಾರವು ವಿದೇಶೀಯರಿಗೆ ಅವಕಾಶ ನೀಡಿದೆ. ದೇಶದಲ್ಲಿ ಮನೆಗಳು ಅಥವಾ ಅಂಗಡಿಗಳನ್ನು ಖರೀದಿಸುವವರು ದೇಶವನ್ನು ತನ್ನ ಮನೆ ಎಂಬುದಾಗಿ ಕರೆಯಬಹುದಾಗಿದೆ.

ಈ ಯೋಜನೆಯನ್ನು ಸೆಪ್ಟಂಬರ್‌ನಲ್ಲಿ ಘೋಷಿಸಲಾಗಿದ್ದು, ಖತರ್‌ನ ತೈಲ ಕೇಂದ್ರಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸಿ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಉದ್ದೇಶವನ್ನು ಇದು ಹೊಂದಿದೆ.

2022ರಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್‌ನ ಹಿನ್ನೆಲೆಯಲ್ಲಿ ಖತರ್ ಹಲವು ಸುಧಾರಣಾ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದು, ವಿದೇಶೀಯರಿಗೆ ಆಸ್ತಿ ಖರೀದಿಸಲು ಅವಕಾಶ ನೀಡಿರುವುದು ಇತ್ತೀಚಿನದಾಗಿದೆ.

ದೋಹಾದ ಮಾನವ ನಿರ್ಮಿತ ಪರ್ಲ್ ದ್ವೀಪದಲ್ಲಿ ಅಥವಾ ಹೊಚ್ಚ ಹೊಸ ಲುಸೈಲ್ ಸಿಟಿ ಯೋಜನೆಯಲ್ಲಿ ಸಮುದ್ರ ಬದಿಯ ಕಟ್ಟಡಗಳಲ್ಲಿ ಮನೆಗಳನ್ನು ಖರೀದಿಸಲು ವಿದೇಶೀಯರನ್ನು ಆಹ್ವಾನಿಸಲಾಗುತ್ತಿದೆ. ಮಾಲ್‌ಗಳಲ್ಲಿ ಅಂಗಡಿಗಳನ್ನು ಖರೀದಿಸುವ ಅವಕಾಶವನ್ನೂ ಅವರಿಗೆ ನೀಡಲಾಗಿದೆ. ಅಂಗಡಿಗಳನ್ನು ಖರೀದಿಸಿದವರಿಗೆ ದೇಶದಲ್ಲಿ ವಾಸ್ತವ್ಯ ಹೂಡುವ ಹಕ್ಕು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News