2020ನೇ ಸಾಲಿನ ಅಮ್ಮ ಪ್ರಶಸ್ತಿಗೆ ಭಾರತಿ ಹೆಗಡೆ, ಸುರೇಶ್ ನಾಗಲಮಡಿಕೆ, ಕೆ.ಎ.ದಯಾನಂದ ಸೇರಿ 7ಮಂದಿ ಆಯ್ಕೆ

Update: 2020-11-12 13:18 GMT
ಕಿರಣ್‍ಭಟ್, ಕೆ.ಎ.ದಯಾನಂದ, ಸಿರನೂರಕರ್, ಭಾರತಿ ಹೆಗಡೆ,  ಸತ್ಯಮಂಗಲ ಮಹಾದೇವ, ಸದೀಂ ಸವದಿ, ಸುರೇಶ್ ನಾಗಲಮಡಿಕೆ

ಕಲಬುರಗಿ, ನ.12: ಇಲ್ಲಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಅಮ್ಮ ಪ್ರಶಸ್ತಿಗೆ ಲೇಖಕಿ ಭಾರತಿ ಹೆಗಡೆ, ವಿಮರ್ಶಕ ಸುರೇಶ್ ನಾಗಲಮಡಿಕೆ, ಹಿರಿಯ ಅಧಿಕಾರಿ ಕೆ.ಎ.ದಯಾನಂದ, ಕಿರಣ್‍ಭಟ್ ಶ್ರೀನಿವಾಸ್ ಸಿರನೂರಕರ್, ಸದೀಂ ಸವದಿ ಮತ್ತು ಸತ್ಯಮಂಗಲ ಮಹಾದೇವ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತಿ ಹೆಗಡೆರವರ ಸೀತಾಳೆದಂಡೆಯ ಕತೆಗಳು(ಕಥಾ ಸಂಕಲನ), ಸುರೇಶ್ ನಾಗಲಮಡಿಕೆರವರ ಹಾಡು ಕಲಿಸಿದ ಹರ(ಸಂಸ್ಕೃತಿ ಸಂಕಥನ), ಕೆ.ಎ.ದಯಾನಂದರವರ ಹಾದಿಗಲ್ಲು(ಆತ್ಮಕಥನ), ಕಿರಣ್‍ಭಟ್‍ರವರ ರಂಗ ಕೈರಳಿ(ಪ್ರವಾಸ ಕಥನ), ಶ್ರೀನಿವಾಸ ಸಿರನೂರಕರ್‍ರವರ ಪುರಂದರದಾಸರ ಬಂಡಾಯ ಪ್ರಜ್ಞೆ(ವೈಚಾರಿಕ ಸಂಕಲನ), ನದೀಂ ಸನದಿರವರ ಹುಲಿಯ ನೆತ್ತಿಯ ನೆರಳು ಮತ್ತು ಡಾ.ಸತ್ಯಮಂಗಲ ಮಹಾದೇವರವರ ಪಂಚವರ್ಣದ ಹಂಸ(ಕವನ ಸಂಕಲನ) ಕೃತಿಗಳು 2020ನೇ ಸಾಲಿನ ಅಮ್ಮ ಪ್ರಶಸ್ತಿಗೆ ಆಯ್ಕೆಯಾಗಿವೆ.

ಪ್ರಶಸ್ತಿ ತಲಾ 5ಸಾವಿರ ರೂ. ನಗದು, ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಒಳಗೊಂಡಿದೆ. ನ.26ರಂದು ಸಂಜೆ 5.30ಕ್ಕೆ ಸೇಡಂನ ಶ್ರೀ ಪಂಚಲೀಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News