ರಾಹುಲ್ ಗಾಂಧಿ ಅಧ್ಯಾಪಕರ ಮೆಚ್ಚುಗೆ ಗಳಿಸಲು ಪ್ರಯತ್ನಿಸುವ ವಿದ್ಯಾರ್ಥಿಯಂತೆ ಕಾಣಿಸುತ್ತಾರೆ : ಆತ್ಮಕತೆಯಲ್ಲಿ ಒಬಾಮ

Update: 2020-11-13 04:13 GMT

ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದು, ರಾಹುಲ್ ಅವರು "ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ. 

ಶಿಕ್ಷಕರ ಮೆಚ್ಚುಗೆ ಗಳಿಸಲು ಪ್ರಯತ್ನಿಸುವ ಆದರೆ ಯಾವುದೇ ವಿಷಯದ ಬಗ್ಗೆ ಪರಿಣತಿ ಸಾಧಿಸುವ ಪ್ರವೃತ್ತಿ ಮತ್ತು ಒಲವು ಹೊಂದಿಲ್ಲದ ವಿದ್ಯಾರ್ಥಿಯಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ. ಎ ಪ್ರಾಮಿಸ್ಡ್ ಲ್ಯಾಂಡ್ ಎಂಬ ಒಬಾಮಾ ಆತ್ಮಚರಿತ್ರೆಯನ್ನು ದಿ ನ್ಯೂಯಾರ್ಕ್ ಟೈಮ್ಸ್ ವಿಮರ್ಶಿಸಿದ್ದು, ಈ ಕೃತಿಯಲ್ಲಿ ಒಬಾಮಾ ವಿಶ್ವದ ಪ್ರಮುಖ ರಾಜಕೀಯ ಮುಖಂಡರ ಬಗ್ಗೆ ಉಲ್ಲೇಖಿಸಿದ್ದಾರೆ.

ರಾಹುಲ್‌ಗಾಂಧಿಯವರ ಬಗ್ಗೆ ಉಲ್ಲೇಖಿಸಿ, "ಪುಕ್ಕಲು ಮತ್ತು ಅಸ್ಥಿರ ಗುಣಗಳು ಅವರಲ್ಲಿವೆ. ಅಭ್ಯಾಸ ಮಾಡುವ ವಿದ್ಯಾರ್ಥಿಯಂತಿರುವ ಅವರು, ಶಿಕ್ಷಕರ ಮೇಲೆ ಪ್ರಭಾವ ಬೀರಲು ಉತ್ಸುಕನಾದ ವಿದ್ಯಾರ್ಥಿಯಂತಿದ್ದಾರೆ. ಆದರೆ ಆಳಕ್ಕೆ ಇಳಿದರೆ ವಿಷಯದ ಬಗ್ಗೆ ಪರಿಣತಿ ಸಾಧಿಸುವ ಪ್ರವೃತ್ತಿ ಅಥವಾ ಒಲವು ಅವರಿಗೆ ಇಲ್ಲ" ಎಂದು ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವಿಮರ್ಶೆಯಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಬಗ್ಗೆಯೂ ಇದರಲ್ಲಿ ಉಲ್ಲೇಖ ಇರುವ ಸಾಧ್ಯತೆ ಇದೆ. "ಚಾರ್ಲ್ ಕ್ರಿಸ್ಟ್ ಮತ್ತು ರಹಾಮ್ ಎಮ್ಯುನಲ್‌ನಂಥ ವ್ಯಕ್ತಿಗಳ ಸೌಂದರ್ಯದ ಬಗ್ಗೆ ಉಲ್ಲೇಖವಿದೆ. ಆದರೆ ಸೋನಿಯಾಗಾಂಧಿಯವರ ಉಲ್ಲೇಖದಂಥ ಒಂದೆರಡು ನಿದರ್ಶನಗಳನ್ನು ಹೊರತುಪಡಿಸಿದರೆ ಮಹಿಳೆಯ ಚೆಲುವಿನ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ" ಎಂದು ವಿಮರ್ಶಾ ವರದಿ ತಿಳಿಸಿದೆ.

ವಿಮರ್ಶೆಯ ಪ್ರಕಾರ, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ಮತ್ತು ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಯತ್ತು ಅದ್ಭುತ ಎಂಬ ವಿವರವೂ ಇದೆ. 768 ಪುಟಗಳ ಆತ್ಮಚರಿತ್ರೆ ಈ ತಿಂಗಳ 17ರಂದು ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಒಬಾಮಾರ ಬಾಲ್ಯ, ರಾಜಕೀಯ ಏಳಿಗೆ, ಅಮೆರಿಕ ಅಧ್ಯಕ್ಷಾವಧಿಯ ಅನುಭವದಂಥ ವಿಚಾರಗಳು ಇಲ್ಲಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News