ಬಿಹಾರ: ವಿಜಯ ಯಾತ್ರೆ ಸಂದರ್ಭ ಮಸೀದಿಯಲ್ಲಿ ದಾಂಧಲೆಗೈದ ಬಿಜೆಪಿ ಕಾರ್ಯಕರ್ತರು; ಆರೋಪ

Update: 2020-11-13 11:43 GMT
Photo: thewire.in

ಪಾಟ್ನಾ: ಬಿಹಾರದ ಪೂರ್ವ ಚಂಪಾರನ್ ಜಿಲ್ಲೆಯ ಜಮುವಾ ಗ್ರಾಮದಲ್ಲಿ ನವೆಂಬರ್ 11ರಂದು ವಿಜಯ ಯಾತ್ರೆ ನಡೆಸುವ ಸಂದರ್ಭ ಬಿಜೆಪಿಯ ಕಾರ್ಯಕರ್ತರು ಮಸೀದಿಯೊಂದರಲ್ಲಿ ದಾಂಧಲೆ ನಡೆಸಿ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಐದು ಮಂದಿಯ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಘಟನೆಯ ಸಂದರ್ಭ  ಹಲವು ವಾಹನಗಳನ್ನೂ ಜಖಂಗೊಳಿಸಿದ ಆರೋಪಿಗಳು ಮಸೀದಿಯ ಧ್ವನಿವರ್ಧಕ ಹಾಗೂ ಎರಡು ಗೇಟುಗಳನ್ನೂ ಮುರಿದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು thewire.in ವರದಿ ಮಾಡಿದೆ.

ಜಮುವಾ ಗ್ರಾಮದಲ್ಲಿ ಸುಮಾರು 20ರಿಂದ 25 ಮುಸ್ಲಿಂ ಕುಟುಂಬಗಳು ನೆಲೆಸಿದ್ದರೆ ಗ್ರಾಮದ ಹಿಂದು ಕುಟುಂಬಗಳ ಸಂಖ್ಯೆ 500ರಷ್ಟಿದೆ. ಬಿಜೆಪಿ ನಾಯಕ ಪವನ್ ಕುಮಾರ್ ಜೈಸ್ವಾಲ್ ಅವರು ಗೆದ್ದಿರುವ ಢಾಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಮುವಾ ಗ್ರಾಮ ಬರುತ್ತದೆ.

"ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿರುವ ವೇಳೆ ಕಲ್ಲುಗಳನ್ನು ಎಸೆಯಲಾಗಿದೆ. ಸುಮಾರು 500 ಮಂದಿ ಪವನ್ ಜೈಸ್ವಾಲ್ ಅವರ  ಗೆಲುವನ್ನು ಸಂಭ್ರಮಿಸಿ ಮೆರವಣಿಗೆ ನಡೆಸುತ್ತಿದ್ದರು. ಮಸೀದಿ ಹತ್ತಿರ ಬರುತ್ತಿದ್ದಂತೆಯೇ ಕಲ್ಲುಗಳನ್ನು ಎಸೆದಿದ್ದಾರೆ. 'ಜೈ ಶ್ರೀ ರಾಮ್' ಘೋಷಣೆ ಕೂಗುತ್ತಾ ಗೇಟುಗಳು ಹಾಗೂ ಧ್ವನಿವರ್ಧಕವನ್ನು ಒಡೆದಿದ್ದಾರೆ,'' ಎಂದು ಮಸೀದಿಯ ಉಸ್ತುವಾರಿ ಹೊತ್ತ ಮಝರ್ ಆಲಂ ಆರೋಪಿಸಿದ್ದಾರೆ. ಈ ಮಸೀದಿ ಈ ಪ್ರದೇಶದ ಅತ್ಯಂತ ಹಳೆಯ ಮಸೀದಿಗಳಲ್ಲೊಂದು ಎಂದೂ ಅವರು ತಿಳಿಸಿದ್ದಾರೆ. "ಇದು ನಿಮ್ಮ ದೇಶವಲ್ಲವೆಂದು ಹೇಳುತ್ತಾ, ನಮಗೆ ಈ ದೇಶ ಬಿಟ್ಟು ತೆರಳಲು ಅವರು ಹೇಳಿದರು,'' ಎಂದು ಅವರು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಘಟನೆಯ ನಂತರ ಗ್ರಾಮದ ಮುಸ್ಲಿಂ ಕುಟುಂಬಗಳು ಭಯಭೀತವಾಗಿವೆ ಆದರೆ ಅಧಿಕಾರಿಗಳು ನಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಢಾಕ ಪೊಲೀಸ್ ಠಾಣಾಧಿಕಾರಿ ಅಭಯ್ ಶ್ರೀನಿವಾಸ್, "ಬಿಜೆಪಿ ಕಾರ್ಯಕರ್ತರ ಮೆರವಣಿಗೆ ಮಸೀದಿ ಹತ್ತಿರ ಬರುತ್ತಿದ್ದಂತೆಯೇ ಅಲ್ಲಿಯೇ ಹೊರಗೆ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬರು ಮೆರವಣಿಗೆಯಲ್ಲಿರುವವರನ್ನು ಉದ್ದೇಶಿಸಿ, ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿರುವುದರಿಂದ ಧ್ವನಿವರ್ಧಕ ನಿಲ್ಲಿಸುವಂತೆ ಕೇಳಿಕೊಂಡರು. ಆದರೆ ಅವರು ಒಪ್ಪದೇ ಇದ್ದಾಗ ವ್ಯಾಗ್ಯುದ್ಧ ನಡೆದು ಕೊನೆಗೆ ಮೆರವಣಿಗೆಯಲ್ಲಿದ್ದವರು ಕಲ್ಲುಗಳನ್ನೆಸೆಯಲು ಪ್ರಾರಂಭಿಸಿದರು,'' ಎಂದು ಹೇಳಿದ್ದಾರೆ. ಘಟನೆ ಸಂಬಂಧ ಎಫ್‍ಐಆರ್ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News