ಮಕ್ಕಳ ದಿನಾಚರಣೆಯಂದೇ ದುರಂತ: ನಾಲೆಯಲ್ಲಿ ಶವವಾಗಿ ಪತ್ತೆಯಾದ ಮೂವರು ಮಕ್ಕಳು

Update: 2020-11-14 15:24 GMT

ಮಡಿಕೇರಿ, ನ.14: ಕುಟುಂಬ ಕಲಹ ಅತಿರೇಕಕ್ಕೆ ಹೋಗಿ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ನಾಲೆಗೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದ್ದು ಮಹಿಳೆ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ.

ಕೊಡಗು ಹಾಸನ ಜಿಲ್ಲೆಗಳ ಗಡಿಭಾಗ ಅರಕಲಗೂಡು ತಾಲೂಕಿನ ಬನ್ನೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಅರಗಲ್ಲು ವ್ಯಾಪ್ತಿಯ ಹಾರಂಗಿ ಎಡದಂಡೆ ನಾಲೆಯಲ್ಲಿ ಮೂವರು ಪುಟ್ಟ ಮಕ್ಕಳ ಶವ ನೀರಿನಲ್ಲಿ ತೇಲಿ ಹೋಗುತ್ತಿದ್ದ ದೃಶ್ಯ ಸ್ಥಳೀಯ ನಿವಾಸಿಗಳಿಗೆ ಗೋಚರಿಸಿದೆ. ಕುಶಾಲನಗರ ಪೊಲೀಸರಿಗೆ ಮಾಹಿತಿ ನೀಡಿ ನಾಲೆಯಲ್ಲಿ ತೇಲಿ ಹೋಗುತ್ತಿದ್ದ ಮಕ್ಕಳ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. 

ಮೂಲತಃ ಚಿತ್ರದುರ್ಗ ಜಿಲ್ಲೆ ನಿವಾಸಿಗಳಾದ ದೇವರಾಜ್ ಮತ್ತು ಚೆನ್ನಮ್ಮ ಎಂಬವರ ಮಕ್ಕಳಾದ ವಿಜಯ್ (6), ವಿನಯ್ (3.5) ಹಾಗೂ ದೀಕ್ಷಾ (2.5) ಮೃತ ದುರ್ದೈವಿ ಪುಟಾಣಿಗಳು. ಈ ಮಕ್ಕಳ ತಾಯಿ ಚೆನ್ನಮ್ಮ (28) ಎಂಬಾಕೆ ಮಕ್ಕಳನ್ನು ನಾಲೆಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತಗೊಂಡಿದ್ದು, ಚನ್ನಮ್ಮಳ ಸುಳಿವು ಸಂಜೆ ತನಕ ಪತ್ತೆಯಾಗಿಲ್ಲ.

ಮಾಹಿತಿ ದೊರೆತ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದು ಕೊಣನೂರು ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ದೇವರಾಜ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಪತಿಯೊಂದಿಗೆ ಜಗಳವಾಡಿದ ಹಿನ್ನಲೆಯಲ್ಲಿ ಪತ್ನಿ ತನ್ನ ಪುಟ್ಟ ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News