ಅವಧಿಗೂ ಮುನ್ನ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ: ಸುಜಾತಾ ಕೃಷ್ಣಪ್ಪ ಸ್ಪಷ್ಟನೆ
ಚಿಕ್ಕಮಗಳೂರು, ನ.14: ಜಿಪಂ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಪಕ್ಷದಲ್ಲಿರುವ ಸಮುದಾಯದ ಇಬ್ಬರು ಮಹಿಳೆಯರ ನಡುವೆ 20/40 ತಿಂಗಳಂತೆ ಅಧಿಕಾರ ಹಂಚಿಕೆಯಾಗಿದೆ. ಮೊದಲ ಅವಧಿಗೆ ಚೈತ್ರಶ್ರೀ 26 ತಿಂಗಳುಗಳ ಕಾಲ ಅಧ್ಯಕ್ಷೆಯಾಗಿದ್ದು, ಅವರ ನಂತರ ನಾನು ಅಧ್ಯಕ್ಷೆಯಾಗಿದ್ದೇನೆ. ತನ್ನ ಅಧಿಕಾರವಧಿ ಪೂರ್ಣಗೊಳ್ಳುವವರೆಗೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಪಕ್ಷ ತನ್ನನ್ನು ಉಚ್ಚಾಟನೆ ಮಾಡಿದರೂ ಬಿಜೆಪಿಯಲ್ಲೇ ಉಳಿಯುತ್ತೇನೆಯೇ ಹೊರತು ಬೇರೆ ಪಕ್ಷಗಳ ಬಾಗಿಲು ತಟ್ಟಲ್ಲ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರು ಮತ್ತು ಕೋರ್ ಕಮಿಟಿ ಸದಸ್ಯರು ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸೂಚನೆ ನೀಡಿದ್ದರು. ಜಿಪಂ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದ ಬಳಿಕ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದೆ. ಆದರೆ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಈಗಾಗಲೇ ಕರೆಯಲಾಗಿದ್ದ ಎರಡು ಜಿಪಂ ಸಾಮಾನ್ಯ ಸಭೆಗಳಿಗೆ ಆಡಳಿತ ಪಕ್ಷದ ಸದಸ್ಯರು ಗೈರಾಗುವಂತೆ ಮಾಡಿದ್ದಾರೆ. ನ.18ಕ್ಕೆ ಮೂರನೇ ಬಾರಿಗೆ ಸಾಮಾನ್ಯ ಸಭೆ ಕರೆದಿದ್ದು, ಆಡಳಿತ ಪಕ್ಷದ ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲು ಸಹಕಾರ ನೀಡಬೇಕು. ಬಳಿಕ ಪಕ್ಷ ಹೇಳಿದಂತೆ ನಾನು ಕೇಳುತ್ತೇನೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ 29 ತಿಂಗಳ ಕಾಲ ಪಕ್ಷಬೇಧ ಮರೆತು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ರಾಜೀನಾಮೆ ವಿಷಯದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಪಕ್ಷದ ಸೂಚನೆಗೆ ವಿರುದ್ಧವಾಗಿ ನಾನೆಂದೂ ನಡೆದುಕೊಂಡಿಲ್ಲ, ನಿಗದಿಪಡಿಸಿದ ಪೂರ್ಣ ಅವಧಿವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ, ಸಚಿವರು, ಶಾಸಕರು ಮತ್ತು ಹಿರಿಯ ಮುಖಂಡರೊಂದಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಮ್ಮತಿ ನೀಡಿದ್ದಾರೆ ಎಂದ ಅವರು, ಜಿಪಂ ವತಿಯಿಂದ ಈಗಾಗಲೇ ರೂಪಿಸಿದ ಯೋಜನೆಗಳು, ಕೆಲವು ಕಾಮಗಾರಿಗಳು ಅಪೂರ್ಣವಾಗಿದ್ದು, ಅವುಗಳನ್ನು ಪೂರ್ಣಗೊಳಿಸಲು ಕ್ರಿಯಾಯೋಜನೆಗೆ ಅನುಮೋದನೆ ನೀಡಬೇಕಿದೆ. ಈ ಉದ್ದೇಶದಿಂದ ಅಧ್ಯಕ್ಷ ಸ್ಥಾನದ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ಕೋರಿದ್ದೇನೆ ಎಂದರು.
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಎರಡು ಬಾರಿ ಕರೆದಿದ್ದು, ಪಕ್ಷದ ಸದಸ್ಯರು ಗೈರಾಗಿದ್ದರು. ಯಾವ ಕಾರಣಕ್ಕೆ ಸಭೆಗೆ ಬಂದಿಲ್ಲವೆಂಬುದು ತಿಳಿದಿಲ್ಲ. ಜಿ.ಪಂ. ಸದಸ್ಯರು ಯಾವುದೇ ಪಕ್ಷದವರಾಗಿರಲಿ ಪಕ್ಷದ ತೀರ್ಮಾನ, ಕಾರ್ಯಕ್ರಮಗಳನ್ನು ಆಡಳಿತದ ಮೇಲೆ ಹೇರಬಾರದು. ಇದರಿಂದ ಜಿಲ್ಲೆಯ ಮತದಾರರಿಗೆ ದ್ರೋಹ ಮಾಡಿದಂತಾಗುತ್ತದೆ. ಪಕ್ಷದ ವಿಚಾರಗಳನ್ನು ಆಡಳಿತದಲ್ಲಿ ತರಬಾರದೆಂಬುದು ನನ್ನ ಮನವಿಯಾಗಿದೆ ಎಂದು ಸುಜಾತಾ ಹೇಳಿದರು.
ಪಕ್ಷದಿಂದ ತನ್ನನ್ನು ಉಚ್ಚಾಟನೆ ಮಾಡುವ ಬಗ್ಗೆ ಯಾವುದೇ ನೋಟೀಸ್ ಬಂದಿಲ್ಲ. ನ.18ಕ್ಕೆ ಸಭೆಗೆ ಭಾಗವಹಿಸದಿದ್ದರೆ ಮತ್ತೊಂದು ಸಭೆಯನ್ನು ಕರೆಯುತ್ತೇನೆ. ಅದರಲ್ಲೂ ಭಾಗವಹಿಸದಿದ್ದರೆ ಮುಂದಿನ ಸದಸ್ಯರ ವಿರುದ್ಧ ಜಿಪಂ ಸಿಇಒ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದ ಅವರು, ನಾನು ಈಗಲೂ ಬಿಜೆಪಿ ಪಕ್ಷದ ಕಾರ್ಯಕರ್ತೆ. ರಾಜೀನಾಮೆ ವಿಚಾರಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಿದರೂ ಪಕ್ಷದಲ್ಲೇ ಇರುತ್ತೇನೆ. ಮುಂಡಾಲ ಸಮುದಾಯದ ವ್ಯಕ್ತಿಯೊಬ್ಬರನ್ನು ಪಕ್ಷ ಜಿಪಂ ಅಧ್ಯಕ್ಷೆಯನ್ನಾಗಿ ಮಾಡುವ ಮೂಲಕ ಉತ್ತಮ ಅವಕಾಶ ನೀಡಿದೆ. ತನ್ನ ಈ ಸ್ಥಾನಮಾನಕ್ಕೆ ಬಿಜೆಪಿ ಪಕ್ಷವೇ ಕಾರಣ. ಸಾಮಾನ್ಯ ಸಭೆ ಪೂರ್ಣಕ್ಕೂ ಮುನ್ನ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಇದೇ ವೇಳೆ ಸುಜಾತಾ ಕೃಷ್ಣಪ್ಪ ಹೇಳಿದವರು.
ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರೊಂದಿಗೆ ಸಮುದಾಯದ ಮುಖಂಡರು ಮಾತುಕತೆಗೆ ಮುಂದಾದಾಗ ಸರಿಯಾಗಿ ಸ್ಪಂದಿಸದೆ ಅಪಮಾನವಾಗುವ ರೀತಿಯಲ್ಲಿ ನಡೆದುಕೊಂಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಸಮುದಾಯ ಮತ್ತು ಬಿಜೆಪಿ ಮುಖಂಡರು ಮಾತುಕತೆ ನಡೆಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪಕ್ಷದ ಮುಖಂಡರು ಮಾತುಕತೆಗೆ ಮುಂದಾಗಬೇಕು.
- ಸುಜಾತಾ ಕೃಷ್ಣಪ್ಪ, ಜಿಪಂ ಅಧ್ಯಕ್ಷೆ