×
Ad

ದೀಪಾವಳಿ ಹಬ್ಬವಿದ್ದರೂ ಸಂಬಳ ನೀಡದ ಸಾರಿಗೆ ಸಂಸ್ಥೆಗಳು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Update: 2020-11-14 18:09 IST

ಬೆಂಗಳೂರು, ನ.14: ದೀಪಾವಳಿ ಹಬ್ಬ ಇದ್ದರೂ ಇನ್ನೂ ಸಂಬಳದ ಭಾಗ್ಯ ಕರುಣಿಸದ ಸಾರಿಗೆ ನಿಗಮಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಎಸ್ಆರ್‌ಟಿಸಿ ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಳಕಿನ ಹಬ್ಬಕ್ಕೂ ಕತ್ತಲೆಯಲ್ಲಿರುವ ಸಾರಿಗೆ ನೌಕರರು ಎಂದು ಸರಕಾರ ಹಾಗೂ ವಿಪಕ್ಷ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಎಸ್ಆರ್‌ಟಿಸಿಯಲ್ಲಿ 38 ಸಾವಿರ ನೌಕರರಿದ್ದಾರೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ ಹಾಗೂ ಎನ್.ಇ.ಕೆ.ಎಸ್.ಆರ್.ಟಿ.ಸಿ ಸೇರಿ 1 ಲಕ್ಷದ 20 ಸಾವಿರ ನೌಕರರಿದ್ದಾರೆ. ಕೋವಿಡ್ ಕಾರಣದಿಂದ ಸರಿಯಾದ ಸಮಯಕ್ಕೆ ಸಂಬಳವಾಗುತ್ತಿಲ್ಲ. ಈ ಬಾರಿ ಹಬ್ಬ ಇರುವುದರಿಂದ ಸರಿಯಾದ ಸಮಯಕ್ಕೆ ಸಂಬಳದ ನಿರೀಕ್ಷೆಯಲ್ಲಿದ್ದ ಸಾರಿಗೆ ಸಿಬ್ಬಂದಿಗೆ ನಿರಾಶೆಯಾಗಿದೆ.

ಇದು ಕೆಎಸ್ಆರ್‌ಟಿಸಿ ಕಥೆಯಾದರೆ ಇತ್ತ ಬಿಎಂಟಿಸಿಯಲ್ಲೂ ಇದೆ ಗೋಳಾಗಿದೆ. ಬಿಎಂಟಿಸಿಯಲ್ಲಿ 38 ಸಾವಿರ ನೌಕರರಿದ್ದಾರೆ. ಬಿಎಂಟಿಸಿಯಲ್ಲಿ ಪ್ರತಿ ತಿಂಗಳು ಏಳನೇ ತಾರೀಖಿನಂದು ಸಂಬಳ ನೀಡುತ್ತಿದ್ದರು. ಆದರೆ, ಈ ಬಾರಿ ಈವರೆಗೆ ಸಂಬಳವಾಗಿಲ್ಲ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನೋವು ತೋಡಿಕೊಳುತ್ತಿರುವ ಸಿಬ್ಬಂದಿ, ದೀಪಾವಳಿಯನ್ನೂ ಕತ್ತಲಲ್ಲಿ ಆಚರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಬಳಿಕ ಸಂಬಳಕ್ಕೆ ಸರಕಾರವನ್ನೇ ನೆಚ್ಚಿಕೊಂಡಿರುವ ಸಾರಿಗೆ ನಿಗಮಗಳಿಂದಾಗಿ, ಸರಕಾರ ಕೊಟ್ಟರೆ ಮಾತ್ರ ಸಂಬಳ ಎಂಬ ಪರಿಸ್ಥಿತಿಗೆ ತಲುಪಿವೆ. ಹೀಗಾಗಿ, ಸಾರಿಗೆ ನೌಕರರಿಗೆ ಕೆಲಸ ಮಾಡಿದರೂ ಸರಿಯಾದ ಸಮಯಕ್ಕೆ ವೇತನ ಕೈಸೇರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ನೌಕರರಿಗೆ ಶೀಘ್ರವೇ ವೇತನ ಪಾವತಿ

ಸಾರಿಗೆ ಇಲಾಖೆಯ ನೌಕರರಿಗೆ ಸಂಬಳ ನೀಡುವ ಸಲುವಾಗಿ ಇಲಾಖೆಯಲ್ಲಿ ಹಣದ ಕೊರತೆಯಿದೆ. ಆದರೆ, ನಾವು ಆರ್ಥಿಕ ಇಲಾಖೆಗೆ ಮತ್ತೊಂದು ಬಾರಿ ಪ್ರಸ್ತಾವ ಸಲ್ಲಿಸುತ್ತೇವೆ. ಶೀಘ್ರದಲ್ಲಿಯೇ ಅವರಿಗೆ ವೇತನ ಪಾವತಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ 1.30 ಲಕ್ಷದಷ್ಟು ಸಿಬ್ಬಂದಿಯಿದ್ದು, ಅವರಿಗೆ ವೇತನ ನೀಡುವ ಸಲುವಾಗಿ ತಿಂಗಳಿಗೆ ಅಂದಾಜು 325 ಕೋಟಿ ಹಣದ ಅಗತ್ಯವಿದೆ. ಕೊರೋನ ಸೋಂಕು ಹರಡುವುದು ತಪ್ಪಿಸಲು ಲಾಕ್‍ಡೌನ್ ಘೋಷಿಸಿದ್ದರಿಂದ ಇಲಾಖೆಗೆ ಕೋಟ್ಯಂತರ ನಷ್ಟವಾಗಿದೆ. ಅದರ ನಡುವೆಯೂ ಲಾಕ್‍ಡೌನ್‍ನಲ್ಲಿ ಎರಡು ತಿಂಗಳ ಸಂಬಳ ನೀಡಿದ್ದೇವೆ. ಆ ಬಳಿಕ ಇನ್ನು, 4 ತಿಂಗಳ ವೇತನವನ್ನು ಶೇ.25ರಷ್ಟನ್ನು ಸಂಬಂಧಿಸಿದ ಸಾರಿಗೆ ನಿಗಮ ಮತ್ತು ಶೇ. 75ರಷ್ಟು ಸರಕಾರದಿಂದ ಹೊಂದಿಸಿ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಆತಂಕ ಹೆಚ್ಚುತ್ತಿರುವುದರಿಂದಾಗಿ ಜನರು ಸಾರಿಗೆ ಬಸ್‍ಗಳಲ್ಲಿ ಸಂಚಾರಕ್ಕೆ ಹಿಂದೆ-ಮುಂದೆ ನೋಡುತ್ತಿದ್ದಾರೆ. ಹೀಗಾಗಿ, ಈಗ ಸಿಗುತ್ತಿರುವ ಆದಾಯವು ಬಸ್‍ಗಳ ಡೀಸೆಲ್‍ಗೆ ಅಷ್ಟೇ ಸಾಕಾಗುತ್ತಿದೆ. ಹೀಗಾಗಿ, ವೇತನ ನೀಡಲು ಕಷ್ಟವಾಗುತ್ತಿದ್ದು, ಹಣದ ಕೊರತೆ ಎದುರಾಗಿದೆ. ಆದುದರಿಂದಾಗಿ ನೌಕರರಿಗೆ ಸಂಬಳ ನೀಡಲು ತೊಂದರೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಆರ್ಥಿಕ ನೆರವು ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೆವು. ಆದರೆ, ಪ್ರಸ್ತಾವ ತಿರಸ್ಕೃತವಾಗಿದೆ. ಹಣ ಕೊಡುವುದು ಕಷ್ಟವಿದೆ ಎಂದು ಆ ಇಲಾಖೆ ಹೇಳಿದೆ. ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಿದ್ದೇವೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ಇದೆ. ಸಿಬ್ಬಂದಿಗೆ ಸಂಬಳ ಕೊಡಿಸುವ ಕೆಲಸವನ್ನು ಮಾಡುತ್ತೇನೆ. ಮುಖ್ಯಮಂತ್ರಿಯೊಂದಿಗೂ ಚರ್ಚಿಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News