ಅಧಿಕಾರ ಬೇಕೆಂಬ ಮನೋಭಾವ ನನಗಿಲ್ಲ: ಹಿರಿಯ ಶಾಸಕ ಉಮೇಶ್ ಕತ್ತಿ
ಬೆಳಗಾವಿ, ನ. 14: `ಅಧಿಕಾರ ಬೇಕು ಎಂಬ ಮನೋಭಾವ ನನಗಿಲ್ಲ. ಮಂತ್ರಿ ಸ್ಥಾನ ನೀಡಿದರೆ ಕೆಲಸ ಮಾಡಿ ತೋರಿಸುತ್ತೇನೆ' ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಎಂಟು ಬಾರಿ ಆಯ್ಕೆಯಾಗಿದ್ದು, ಹಿರಿಯ ಶಾಸಕನಾಗಿದ್ದೇನೆ. ನುರಿತ ರಾಜಕಾರಣಿಯಾಗಿದ್ದೇನೆ. ಆದರೆ, ಸಚಿವ ಸ್ಥಾನಕ್ಕಾಗಿ ನಾನು ಯಾರ ಹಿಂದೆಯೂ ಹೋಗುವುದಿಲ್ಲ. ಸಚಿವ ಸ್ಥಾನ ನೀಡಿದರೆ ಅಭಿವೃದ್ಧಿ ಕಾರ್ಯಗಳ ಮೂಲಕ ನಾನೇನು ಎಂದು ತೋರಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ಸಚಿವ ಸ್ಥಾನ ಸಿಕ್ಕರೆ ಕೆಲಸ ಮಾಡುವೆ. ಇಲ್ಲವಾದರೆ ನಾನು ಶಾಸಕನಾಗಿಯೇ ಮುಂದುವರಿಯುತ್ತೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮನಸ್ಸು ಮಾಡಿದರೆ ನನಗೆ ಸಚಿವ ಸ್ಥಾನ ನಿಶ್ಚಿತವಾಗಿಯೂ ದೊರೆಯಲಿದೆ. ಸಿಎಂ ಅವರು ಸಚಿವ ಸಂಪುಟ ವಿಸ್ತರಣೆಯ ವೇಳೆ ನನಗೆ ಸಚಿವ ಸ್ಥಾನ ನೀಡುವ ದೃಢ ವಿಶ್ವಾಸವಿದೆ ಎಂದು ಉಮೇಶ್ ಕತ್ತಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.