ಕೊರೋನದಿಂದ ಮುಕ್ತಿ ದೊರೆತು ನೆಮ್ಮದಿಯಿಂದ ಬದುಕುವಂತಾಗಲಿ: ದೀಪಾವಳಿಗೆ ಸಿಎಂ ಸಹಿತ ಗಣ್ಯರ ಶುಭ ಹಾರೈಕೆ
ಬೆಂಗಳೂರು, ನ. 14: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ನಾಡಿನ ಜನತೆಯ ಬಾಳಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಹಾಗೂ ಆರೋಗ್ಯದ ಬೆಳಕು ಮೂಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಪಾಲ ವಜುಭಾಯಿ ವಾಲಾ ಸಹಿತ ಹಲವು ಗಣ್ಯರು ಶುಭ ಕೋರಿದ್ದಾರೆ.
ರೋಗದಿಂದ ಮುಕ್ತಿ ದೊರೆಯಲಿ: `ಬೆಳಕಿನ ಹಬ್ಬ ದೀಪಾವತಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಹೊತ್ತು ತರಲಿ. ರಾಜ್ಯವನ್ನು ಕಾಡುತ್ತಿರುವ ಕೊರೋನ ಸಾಂಕ್ರಾಮಿಕದಿಂದ ಮುಕ್ತಿ ದೊರೆತು ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಹಾರೈಸಿದ್ದಾರೆ.
ಶನಿವಾರ ಟ್ವೀಟ್ ಮಾಡಿರುವ ಅವರು, `ಪರಿಸರ ಸ್ನೇಹಿಯಾಗಿ, ಸುರಕ್ಷಿತವಾಗಿ, ಎಲ್ಲ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನು ಆಚರಿಸೋಣ, ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಕೊರೋನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ. ಮುನ್ನಚ್ಚರಿಕೆ ಇರಲಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ. ಸರಳ, ಸುರಕ್ಷಿತ ದೀಪಾವಳಿ ಆಚರಿಸಿ' ಎಂದು ಸಲಹೆ ಮಾಡಿದ್ದಾರೆ.
ಅಂಧಕಾರ ತೊಲಗಲಿ: `ಕೊರೋನ ಸೋಂಕಿನ ಅಂಧಕಾರ ತೊಲಗಲಿ. ಎಲ್ಲರ ಮನೆ ಮನದಲ್ಲಿ ನಂದಾದೀಪ ಬೆಳಗಲಿ. ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿ ಸುಖ, ಶಾಂತಿ ಮತ್ತು ಸಮೃದ್ಧಿ ತರಲಿ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾರೈಸಿದ್ದಾರೆ.
ಹೃದಯ ಬೆಳಗಲಿ: `ದೀಪಗಳ ಹಬ್ಬವು ಕತ್ತಲೆಯಿಂದ ಬೆಳಕಿಗೆ ಮತ್ತು ಬಡತನದಿಂದ ಸಮೃದ್ಧಿ ಕಡೆಗೆ ಸಾಗಲು ಪ್ರೇರಣೆ ನೀಡುತ್ತದೆ. ಸಹಾನುಭೂತಿ, ದಯೆ, ಪ್ರೀತಿ ಮತ್ತು ಸದಾಚಾರದ ದೀಪಗಳು ನಮ್ಮ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಬೆಳಗಲಿ' ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾ ಕೋರಿದ್ದಾರೆ.
`ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಸಕಲ ಐಶ್ವರ್ಯ, ಸಂಪತ್ತು, ಆರೋಗ್ಯವನ್ನು ದೇವರು ನೀಡಲಿ' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ(ಕೆಪಿಸಿಸಿ) ಡಿ.ಕೆ.ಶಿವಕುಮಾರ್ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಹೋರಾಟ ನೆನಪಿರಲಿ: `ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿನಲ್ಲಿ ಹೊಸ ಬೆಳಕು ಮೂಡಲಿ. ಹಬ್ಬದ ಸಂಭ್ರಮವಿರಲಿ. ಕೊರೋನ ವೈರಸ್ ಸೋಂಕಿನ ವಿರುದ್ಧದ ಹೋರಾಟ ನೆನಪಿರಲಿ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಟ್ಟರ್ ಮೂಲಕ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.
ದೀಪಾವಳಿಯ ದೀಪದ ಸಾಲುಗಳು ನನ್ನ ಜನರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಆರೋಗ್ಯದ ಬೆಳಕು ಪಸರಿಸಲಿ. ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ