×
Ad

ನ.26, 27ರ ಸಾರ್ವತ್ರಿಕ ಮುಷ್ಕರಕ್ಕೆ ದೇವದಾಸಿ ಮಹಿಳೆಯರ ಬೆಂಬಲ

Update: 2020-11-14 18:59 IST

ಬೆಂಗಳೂರು, ನ.14: ಕಾರ್ಮಿಕ ಸಂಘಗಳು ಹಾಗೂ ರೈತ ಸಂಘಗಳು ನ. 26 ಹಾಗೂ 27 ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಮತ್ತು ಗ್ರಾಮೀಣ ಬಂದ್‍ಗೆ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಬೆಂಬಲ ಸೂಚಿಸಿದ್ದು, ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.

ದೇಶ ಕೋವಿಡ್ 19ರಿಂದ ಬಾಧಿತವಾಗಿ ಆರ್ಥಿಕ ಹಾಗೂ ಅನಾರೋಗ್ಯದ ಸಂಕಷ್ಟದಲ್ಲಿರುವಾಗ ಜನತೆಯ ಸಂಕಷ್ಟ ನಿವಾರಣೆಗೆ ಕ್ರಮ ವಹಿಸುವ ಬದಲು ಕೇಂದ್ರ ಸರಕಾರ ದೇಶವನ್ನು ಕಾರ್ಪೋರೇಟ್ ಕಂಪನಿಗಳ ಗುಲಾಮಿ ದೇಶವನ್ನಾಗಿಸುವ ಹುನ್ನಾರದಿಂದ, ಕಾರ್ಮಿಕರು, ರೈತರು, ಕೂಲಿಕಾರರು, ಕಸುಬುದಾರರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮತ್ತು ಎಲ್ಲ ಗ್ರಾಹಕರ ವಿರೋಧಿಯಾದ ಕಾನೂನುಗಳಿಗೆ ಕ್ರಮವಹಿಸಿರುವುದು ಅಕ್ಷಮ್ಯವಾಗಿದೆ. ಇದು, ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕಾರ್ಮಿಕರು ಹಾಗೂ ರೈತರು, ದಲಿತರು ಮತ್ತು ಮಹಿಳೆಯರು, ಸಮರಶೀಲ ಚಳುವಳಿಗಳನ್ನು ಸಂಘಟಿಸಿ ಗಳಿಸಿದ ಹಕ್ಕುಗಳನ್ನು ಇಲ್ಲವಾಗಿಸುವ ಮತ್ತು ಅವುಗಳನ್ನು ಕಾರ್ಪೋರೇಟ್ ಕಂಪನಿಗಳ ಸುಲಿಗೆಗೆ ಒತ್ತೆ ಇಡುವ ದುಷ್ಕೃತ್ಯವಾಗಿದೆ ಎಂದು ಸಂಘಟನೆಯು ಆಪಾದಿಸಿದೆ.

ಕಾರ್ಮಿಕ ವಿರೋದಿ ಕಾಯ್ದೆಗಳು ಹಾಗೂ ರೈತ ಸಂಕುಲವನ್ನೇ ನಾಶಗೈಯ್ಯುವ ಕಾರ್ಪೋರೇಟ್ ಕೃಷಿ ಕಾಯ್ದೆಗಳು, ಗ್ರಾಹಕರನ್ನು ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ಮತ್ತು ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿಯ ವಿಚಾರಗಳನ್ನು ತಕ್ಷಣವೇ ವಾಪಾಸು ಪಡೆಯಬೇಕೆಂದು ನಡೆಯಲಿರುವ ಈ ಚಳುವಳಿ ದೇಶ ಪ್ರೇಮಿ ಚಳುವಳಿಯಾಗಿದೆ.

ದೇವದಾಸಿ ಮಹಿಳೆಯರು, ದಲಿತರು ಹಾಗೂ ಕೃಷಿಯ ಅನುಭವ ಹೊಂದಿರುವ ಬಡವರಿಗೆ ಜಮೀನು ನೀಡಿ ಅವರನ್ನು ಕೃಷಿಕರನ್ನಾಗಿಸುವ ಮತ್ತು ಆ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಿ, ಜಾತಿ ಹಾಗೂ ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯಾಚರಣೆಗಳಿಂದ ರಕ್ಷಿಸುವ ಬದಲು, ಇವರಿಗಿರುವ ಅಲ್ಪ ಸ್ವಲ್ಪ ಆದಾಯದ ಮೂಲಗಳನ್ನು ಕಸಿದು ಬೀದಿಗೆ ದೂಡಲು ನೆರವಾಗುವಂತೆ ರಾಜ್ಯ ಸರಕಾರ ಭೂ ಸುಧಾರಣಾ ತಿದ್ದುಪಡಿ ಹಾಗೂ ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ಹೊರಡಿಸಿರುವುದು ತೀವ್ರ ಖಂಡನೀಯವಾಗಿದೆ ಎಂದು ಸಂಘಟನೆಯ ಅಧ್ಯಕ್ಷೆ ಟಿ.ವಿ.ರೇಣುಕಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News