ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ: ಶನಿವಾರಸಂತೆ ಗ್ರಾಮ ಲೆಕ್ಕಿಗನ ಬಂಧನ
ಮಡಿಕೇರಿ, ನ.14: ವ್ಯಕ್ತಿಯೊಬ್ಬರ ಜಮೀನಿಗೆ ಕಂದಾಯ ನಿಗದಿ ಮತ್ತು ಅವರ ಪತ್ನಿಗೆ ಸರಕಾರದ ಸಂಧ್ಯಾ ಸುರಕ್ಷಾ ಪಿಂಚಣಿಯ ಕಡತ ವಿಲೇವಾರಿಗಾಗಿ 5 ಸಾವಿರ ರೂ. ಹಣವನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಶನಿವಾರಸಂತೆಯ ನಾಡ ಕಚೇರಿಯ ಗ್ರಾಮ ಲೆಕ್ಕಿಗನನ್ನು ಹಣ ಸಹಿತ ಬಂಧಿಸಿದ್ದಾರೆ.
ಶನಿವಾರಸಂತೆ ನಾಡ ಕಚೇರಿಯ ಗ್ರಾಮ ಲೆಕ್ಕಿಗ ಜಟ್ಟಪ್ಪ ರಾಮಣ್ಣ ಕಟಬರ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 5 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ.
ಶನಿರಾರಸಂತೆ ನಡ್ಲುಕೊಪ್ಪ ನಿವಾಸಿ ಜಿ.ಎಂ. ಮುತ್ತಪ್ಪ ಎಂಬವರು ತಮ್ಮ ಜಮೀನು ಸರ್ವೆ ನಂ 173, 117, 153 ಭೂಮಿಗೆ ಕಂದಾಯ ನಿಗದಿ ಮಾಡುವುದು ಹಾಗೂ ತಮ್ಮ ಪತ್ನಿ ಸುಬ್ಬಮ್ಮ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಪಡೆಯಲು ಶನಿವಾರಸಂತೆ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ನಾಡ ಕಚೇರಿಯ ಗ್ರಾಮ ಲೆಕ್ಕಿಗ ಜಟ್ಟಪ್ಪ ರಾಮಣ್ಣ ಕಟಬರ ಎಂಬಾತ ಕಡತ ವಿಲೇವಾರಿಗಾಗಿ 5 ಸಾವಿರ ರೂ.ಗಳನ್ನು ನೀಡುವಂತೆ ಬೇಡಿಕೆ ಮುಂದಿಟ್ಟಿದ್ದ. ಹೀಗಾಗಿ ಜಿ.ಎಂ. ಮುತ್ತಪ್ಪ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನ.13ರಂದು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಶುಕ್ರವಾರ ಶನಿವಾರಂತೆ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಿಗ ಜಟ್ಟಪ್ಪ ರಾಮಣ್ಣ ಕಟಬರ ಮುತ್ತಪ್ಪ ಅವರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿ ಗ್ರಾಮ ಲೆಕ್ಕಿಗನನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಲಂಚ ಪಡೆಯುತ್ತಿದ್ದ 5 ಸಾವಿರ ರೂ. ನಗದನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್, ವೃತ್ತ ನಿರೀಕ್ಷಕ ಶ್ರೀಧರ್, ಶಿಲ್ಪ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.