‘ರೈತರೊಂದಿಗೊಂದು ದಿನ’ ಕಾರ್ಯಕ್ರಮಕ್ಕೆ ಸಚಿವ ಬಿ.ಸಿ.ಪಾಟೀಲ್ ಚಾಲನೆ

Update: 2020-11-14 14:35 GMT

ಮಂಡ್ಯ, ನ.14: ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ರೈತರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ಘೋಷಿಸಿರುವ ‘ರೈತರೊಂದಿಗೊಂದು ದಿನ’ ವಿನೂತನ ಕಾರ್ಯಕ್ರಮಕ್ಕೆ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಮಡುವಿನಕೋಡಿ ಗ್ರಾಮದ ಪ್ರಗತಿಪರ ರೈತ ಮಹಿಳೆ ಲಕ್ಷ್ಮಿದೇವಮ್ಮ ಅವರ ಸಮಗ್ರ ಕೃಷಿ ತೋಟಕ್ಕೆ ಭೇಟಿ ಕೊಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಭತ್ತದ ಗದ್ದೆ ವೀಕ್ಷಿಸಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಚಾಫ್‍ಕಟರ್ ನಿಂದ ಹಸುಗಳ ಮೇವಿಗಾಗಿ ಹುಲ್ಲು ಕತ್ತರಿಸಿದ ಬಿ.ಸಿ.ಪಾಟೀಲ್, ಬಳಿಕ ಹಸುವಿನ ಹಾಲು ಕರೆದು, ಸಾವಯವ ಹಾಲಿನ ಕೇಂದ್ರದ ವೀಕ್ಷಣೆ ಮಾಡಿದರು. ನಂತರ, ರಾಗಿ ಪೈರು ನಾಟಿ ಕಾರ್ಯದಲ್ಲಿ ಭಾಗಿಯಾದರು. ರೈತರ ಜತೆ ಭತ್ತದ ಬೆಳೆಗೆ ಗೊಬ್ಬರ ಎರಚಿದರು, ಟ್ರ್ಯಾಕ್ಟರ್ ಚಾಲನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಟೀಲ್, ರೈತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಗ್ರ ಕೃಷಿ ಬಗ್ಗೆ ಅರಿವು ಮೂಡಿಸಿ ಹುರಿದುಂಬಿಸುವುದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು 2 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಬೆಳಗಿನಿಂದ ಸಂಜೆವರೆಗೆ ರೈತರ ಜತೆ ಕಲೆತು ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ತಜ್ಞರು ಕೃಷಿ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ರೈತರನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

ಇದೇ ವೇಳೆ ಪಾಟೀಲ್ ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಸಿ.ಪಾಟೀಲ್ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News