ಔರಾದ್ಕರ್ ವರದಿ ಯಥಾವತ್ತಾಗಿ ಜಾರಿಗೊಳಿಸಲು ಸಿಎಂಗೆ ಎಂ.ಬಿ.ಪಾಟೀಲ್ ಮನವಿ

Update: 2020-11-14 17:13 GMT

ಬೆಂಗಳೂರು, ನ.14: ಪೊಲೀಸರ ವೇತನ ಹೆಚ್ಚಳ ಸೇರಿದಂತೆ ಇನ್ನಿತರೆ ಬೇಡಿಕೆಗಳ ಸಂಬಂಧ ರಾಘವೇಂದ್ರ ಔರಾದ್ಕರ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಮನವಿ ಮಾಡಿದ್ದಾರೆ.

ಈ ಸಂಬಂಧ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನ ಶ್ರೇಣಿ ಹೆಚ್ಚಿಸುವಿಕೆ, ಭತ್ತೆ ಹಾಗೂ ಇತರೆ ಸೌಕರ್ಯಗಳನ್ನು ನೀಡುವ ಕುರಿತು ಔರಾದ್ಕರ್ ವರದಿಯಲ್ಲಿ ಶಿಫಾರಸ್ಸುಗಳನ್ನು ಮಾಡಲಾಗಿದೆ. ಆದರೆ, ರಾಜ್ಯ ಸರಕಾರ ಈ ವರದಿಯನ್ನು ಭಾಗಶಃ ಮಾತ್ರ ಜಾರಿಗೊಳಿಸಿದ್ದು, ಪೂರ್ಣ ಪ್ರಮಾಣದಲ್ಲಿ ಯಥಾವತ್ತಾಗಿ ಜಾರಿಗೆ ತಂದಿಲ್ಲ. ಹಣಕಾಸು ಇಲಾಖೆ ನಿರ್ಧಾರದಿಂದ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಅನ್ವಯವಾಗುತ್ತದೆ. ಅಲ್ಲದೆ, ಈಗಾಗಲೇ ಅನೇಕ ವರ್ಷಗಳ ಕಾಲ ಹಗಲಿರುಳು ಸೇವೆ ಸಲ್ಲಿಸುತ್ತಿರುವ ರಾಜ್ಯದ ಪೊಲೀಸ್ ಸಿಬ್ಬಂದಿಗೆ ಅನ್ವಯವಾಗದೆ ಇರುವುದು ನಿರಾಶಾದಾಯಕ ಎಂದು ತಿಳಿಸಿದ್ದಾರೆ.

ನಾಡಿನ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗೆ ನಾವು ಇನ್ನೂ ಹೆಚ್ಚು ಪ್ರೋತ್ಸಾಹ, ವೇತನ ಹಾಗೂ ಭತ್ಯೆ ಹೆಚ್ಚಿಸುವ ಮೂಲಕ ಇತರೆ ಸೌಲಭ್ಯಗಳನ್ನು ನೀಡಿ ಅವರನ್ನು ಗೌರವಿಸಬೇಕಿದೆ ಎಂದು ಹೇಳಿರುವ ಅವರು, ಕೊರೋನದಂತಹ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಪಣಕ್ಕಿಟ್ಟು, ಕರ್ತವ್ಯ ನಿರ್ವಹಿಸಿರುವ ರಾಜ್ಯದ ಪೊಲೀಸ್ ಇಲಾಖೆಯ ಸಮಸ್ತ ಸಿಬ್ಬಂದಿಗೆ, ಔರಾದ್ಕರ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ನ್ಯಾಯ ದೊರಕಿಸಬೇಕಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News