ಮಂಗಳವಾರದಿಂದ ಅಂತಿಮ ಪದವಿ, ಸ್ನಾತಕೋತ್ತರ ಪದವಿ ತರಗತಿ ಪ್ರಾರಂಭ

Update: 2020-11-15 11:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.15: ಸರಕಾರದ ಆದೇಶದಂತೆ ನ.17ರಿಂದ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಅಂತಿಮ ವರ್ಷದ ತರಗತಿಗಳು ಪುನರ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೊರೋನ ಲಾಕ್‍ಡೌನ್‍ನಿಂದಾಗಿ 9 ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ವಿಶ್ವ ವಿದ್ಯಾಲಯಗಳ ತರಗತಿಗಳನ್ನು ಪ್ರಾರಂಭಿಸಲು ವಿಶ್ವವಿದ್ಯಾಲಯದ ಮಟ್ಟದಲ್ಲಿ ಕುಲಪತಿಗಳ ನೇತೃತ್ವದಲ್ಲಿ ವ್ಯಾಪ್ತಿಗೆ ಒಳಪಟ್ಟ ಪ್ರಾಂಶುಪಾಲರು, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರ ಸಭೆ ನಡೆದಿದೆ. ಈ ವೇಳೆ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ಹಾಗೂ ತರಗತಿಗಳನ್ನು ಪ್ರಾರಂಭಿಸಲು ಮಾಡಿಕೊಳ್ಳಬೇಕಾದ ವ್ಯವಸ್ಥೆಗಳ ಕುರಿತು ಪರಿಶೀಲನಾ ಕಾರ್ಯ ನಡೆಸಲಾಗಿದೆ.

ಯುಜಿಸಿ ವತಿಯಿಂದ ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಪ್ರಮಾಣಿಕ ಕಾರ್ಯಾಚರಣ ವಿಧಾನವನ್ನು ಪ್ರಕಟಿಸಿದ್ದು, (ಎಸ್‍ಒಪಿ) ಅದನ್ನು ಅನುಷ್ಟಾನಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್-19 ಸೋಂಕು ಹರಡದಂತೆ ತಡೆಯಲು ತರತಿಗಳನ್ನು ಆಯೋಜಿಸಲು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸಜ್ಜುಗೊಳಿಸಲು ಕಾರ್ಯಾಚರಣಾ ತಂಡಗಳನ್ನು ರೂಪಿಸಲಾಗಿದೆ. ಪ್ರತಿ ತಂಡವು ಸತತವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಣೆ ಹಾಗೂ ಮೇಲ್ವಿಚಾರಣೆ ಮಾಡಲಿವೆ.

ಕೇವಲ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಿದ್ದು, ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಒಟ್ಟು ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಸೂಚನೆ ನೀಡಲಾಗಿದೆ. ಹಾಗೂ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಪೋಷಕರಿಂದ ನಿಗದಿತ ನಮೂನೆಯಲ್ಲಿ ಒಪ್ಪಿಗೆ ಪತ್ರ ಪಡೆಯಲು ಸೂಚಿಸಲಾಗಿದೆ.

ಬೋಧಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಮೂರು ದಿನಗಳ ಮುಂಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು ತರಗತಿಗಳಿಗೆ ಹಾಜರಾಗಲು ಸೂಚಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ, ಬೋಧಕರಿಗೆ ಹಾಗೂ ಇತರೆ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ತರಗತಿಗಳು ಪ್ರಾರಂಭಿಸಲು ಅನುಕೂಲವಗುವಂತೆ ಈಗಾಗಲೇ ಕಾಲೇಜು ಕಟ್ಟಡಗಳನ್ನು, ಶೌಚಾಲಯ, ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಇತ್ಯಾದಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ತರಗತಿಗಳು ಆರಂಭವಾದ ನಂತರ ನಿಗದಿತ ಸಮಯದಲ್ಲಿ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ'

-ಪ್ರೊ.ವೇಣುಗೋಪಾಲ್, ಕುಲಪತಿ ಬೆಂಗಳೂರು ವಿಶ್ವವಿದ್ಯಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News