ಮರಾಠಾ ಪ್ರಾಧಿಕಾರ ರಚನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

Update: 2020-11-15 15:57 GMT

ಬೆಂಗಳೂರು, ನ. 15: ರಾಜ್ಯ ಸರಕಾರ ಮರಾಠಾ ಪ್ರಾಧಿಕಾರ ರಚನೆಗೆ ಮುಂದಾಗಿರುವುದನ್ನು ಖಂಡಿಸಿ ರವಿವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಯಾವುದೇ ಕಾರಣಕ್ಕೂ ಮರಾಠ ಪ್ರಾಧಿಕಾರವನ್ನು ರಚಿಸಬಾರದು. ಇಂದು ಮರಾಠ, ನಾಳೆ ತಮಿಳು, ತೆಲುಗು, ಮಲಯಾಳಿ ಪ್ರಾಧಿಕಾರ ಹೀಗೆ ಜಾರಿಯಾಗುತ್ತಾ ಹೋದರೆ ರಾಜ್ಯಕ್ಕೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮರಾಠಿ ಪ್ರಾಧಿಕಾರ ರಚನೆಯ ತೀರ್ಮಾನವನ್ನು ಕೈಬಿಡಬೇಕು. ಇಲ್ಲವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪಟಾಕಿ ಸಿಡಿಸಿ ಆಕ್ರೋಶ ಹೊರ ಹಾಕಿದರು.

ಕನ್ನಡ ಪರ ಸಂಘಟನೆಗಳಿಂದ ವಿರೋಧ: ರಾಜ್ಯ ಸರಕಾರ ದಿಢೀರನೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದ್ದು, ಇದಕ್ಕೆ ರಾಜ್ಯದ ನಾನಾ ಭಾಗಗಳಲ್ಲಿ ಅಪಸ್ವರ ಕೇಳಿ ಬಂದಿದೆ. ಯಾವುದೇ ಮಾಹಿತಿಯನ್ನು ಕೊಡದೆ ಏಕಾಏಕಿ ಪ್ರಾಧಿಕಾರ ರಚನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಬಸವ ಕಲ್ಯಾಣದ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮರಾಠಿಗರ ಮತ ಸೆಳೆಯುವ ಏಕೈಕ ಉದ್ದೇಶದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಮುಂದಾಗಿದ್ದಾರೆಂದು ಆರೋಪಿಸಿ ಸರಕಾರದ ಧೋರಣೆಗೆ ಕನ್ನಡ ಪರ ಸಂಘಟನೆಗಳಿಂದಲೇ ವಿವಿಧ ಸ್ತರಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News