7ನೆ ದಿನಕ್ಕೆ ಕಾಲಿಟ್ಟ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಧರಣಿ

Update: 2020-11-15 12:35 GMT

ಬೆಂಗಳೂರು, ನ. 15: ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯು ತನ್ನ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಪೆನಿಯ ಮುಂದೆ ಕಾರ್ಮಿಕರ ಪರವಾಗಿ ಧರಣಿ ನಡೆಸಲಿದ್ದಾರೆಂದು ಜೆಡಿಎಸ್ ಯುವ ಮುಖಂಡ ಚೇತನಕುಮಾರ ಲಿಂಗದಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಏಳು ದಿನದಿಂದ ಕಾರ್ಮಿಕರು ನಡೆಸುತ್ತಿರುವ ಕಾರ್ಮಿಕರ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟೊಯೋಟಾ ಕಂಪೆನಿಯ ಮಾಲಕರು ಕಂಪೆನಿಗೆ ಬಂಡವಾಳ ಹಾಕಿರಬಹುದು. ಆದರೆ, ಆ ಕಂಪೆನಿಯನ್ನು ಲಾಭದಾಯಕವಾಗಿ, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಕಾರ್ಮಿಕರ ಶ್ರಮವಾಗಿದೆ. ಹೀಗಾಗಿ ಕಂಪೆನಿಯು ಕಾರ್ಮಿಕರ ನಂಬಿಕೆಗೆ ದ್ರೋಹ ಮಾಡುವಂತಹ ಕೆಲಸವನ್ನು ಮಾಡಬಾರದೆಂದು ಒತ್ತಾಯಿಸಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯು ತನ್ನ ಜಮೀನು, ನೀರು ಸೇರಿದಂತೆ ಮೂಲಭೂತ ಅಗತ್ಯಗಳನ್ನು ರಿಯಾಯಿತಿ ದರದಲ್ಲಿ ಪಡೆದಿದೆ. ಕಾರ್ಮಿಕರು ಹಗಲು-ರಾತ್ರಿಯಿಡಿ ಶ್ರಮಿಸಿದ್ದಾರೆ. ಈಗ ಕಂಪೆನಿಯು ತನ್ನ ಸ್ವಾರ್ಥಕ್ಕಾಗಿ ದಿಢೀರನೆ ಸಾವಿರಾರು ಕಾರ್ಮಿಕರನ್ನು ತೆಗೆಯಲು ಹೊರಟಿರುವುದು ಕಾನೂನು ವಿರೋಧಿಯಾಗಿದೆ. ಇದಕ್ಕೆ ಜೆಡಿಎಸ್ ಪಕ್ಷವು ಅವಕಾಶ ಮಾಡಿಕೊಡುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕಂಪೆನಿಯೂ ಕೂಡಲೇ ಬೀಗಮುದ್ರೆ(ಲಾಕ್ ಔಟ್) ತೆರವು ಮಾಡಬೇಕು. ಕಾರ್ಮಿಕರ ಅಮಾನತ್ತು ಹಿಂಪಡೆಯಬೇಕು. ಮಲ-ಮೂತ್ರ ವಿಸರ್ಜನೆಗೆ ತೆರಳಲು ಅವಕಾಶ ನೀಡದೆ ಅಮಾನವೀಯವಾಗಿ ದುಡಿಸಿಕೊಳ್ಳುವ ಒತ್ತಡ ತಂತ್ರವನ್ನು ಕೂಡಲೇ ಕೈಬಿಟ್ಟು ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News