ಕೆಎಸ್ಆರ್‌ಟಿಸಿ ನೌಕರರ ವೇತನ ವಿಳಂಬ ಸರಕಾರದ ಆಡಳಿತ ವೈಫಲ್ಯ: ದಿನೇಶ್ ಗುಂಡೂರಾವ್

Update: 2020-11-15 12:45 GMT

ಬೆಂಗಳೂರು, ನ. 15 : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್‌ಟಿಸಿ) ನೌಕರರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ವೇತನ ನೀಡದಿರುವುದು ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕ ಸಾರಿಗೆಯ ನಾಲ್ಕು ನಿಗಮಗಳಲ್ಲಿನ ಲಕ್ಷಾಂತರ ನೌಕರರಿಗೆ ವೇತನ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಅಂದರೆ, ಸರಕಾರದ ಆಡಳಿತದ ವೈಫಲ್ಯಕ್ಕೆ ಈ ಘಟನೆ ಕೈಗನ್ನಡಿಯಾಗಿದೆ ಎಂದು ದೂರಿದ್ದಾರೆ.

ಸ್ವತಃ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬಳಿ ಸಾರಿಗೆ ಇಲಾಖೆಯಿದೆ. ಆದರೂ, 1.35 ಲಕ್ಷ ನೌಕರರಿಗೆ ಸಂಬಳ ನೀಡಿಲ್ಲ. ಸಂಬಳವಿಲ್ಲದೇ ದೀಪಾವಳಿಯ ಸಡಗರದ ಹಬ್ಬವನ್ನೂ ಸಾರಿಗೆ ನೌಕರರು ಆಚರಿಸಲು ಸಾಧ್ಯವಾಗದಂತಾಗಿದೆ. ಸರಕಾರ ಕೂಡಲೇ ವೇತನ ನೀಡುವುದಕ್ಕೆ ಮುಂದಾಗಬೇಕು. ಸಚಿವರು ನೆಪ ಹೇಳುವುದನ್ನು ಬಿಡಬೇಕು ಎಂದು ಹೇಳಿರುವ ಗುಂಡೂರಾವ್, ಕೋವಿಡ್ ಬಿಸಿ ಕೇವಲ ಸಾರಿಗೆ ಇಲಾಖೆಗೆ ಮಾತ್ರ ತಟ್ಟಿಲ್ಲ ಎಂದು ಹೇಳಿದ್ದಾರೆ.

ಸರಕಾರ ಕೋವಿಡ್ ನೆಪ ಹೇಳುವುದು ಬಿಟ್ಟು ಸಾರಿಗೆ ಇಲಾಖೆ, ಸಂಪನ್ಮೂಲ ಕ್ರೋಢೀಕರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗ ಹಣಕಾಸು ಇಲಾಖೆ ಕಡೆ ಬೊಟ್ಟು ತೋರಿಸಿದರೆ ಸಾರಿಗೆ ನೌಕರರ ಜೀವನ ನಡೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಎರಡೇ ದಿನದಲ್ಲಿ ಸಜ್ಜಾಗುವುದು ಹೇಗೆ?: ರಾಜ್ಯ ಸರಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ ಹೊರಡಿಸುವುದರ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯ ವೇಳಾಪಟ್ಟಿಗಳು ಅಭ್ಯರ್ಥಿಗಳ ಆತಂಕ ಹೆಚ್ಚಿಸಿದೆ. ಎರಡೇ ದಿನಗಳ ಅಂತರದಲ್ಲಿ ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಈ ಎರಡೂ ಸ್ಪರ್ಧಾತ್ಮಕ ಪರೀಕ್ಷೆಗೆ ಭಿನ್ನ ಸಿದ್ದತೆ ನಡೆಸಬೇಕು. ಎರಡು ಪರೀಕ್ಷೆಗಳ ನಡುವೆ ಕನಿಷ್ಠ 1 ತಿಂಗಳ ಅಂತರವಿರಬೇಕು. ಹೀಗಾಗಿ ಕೆಪಿಎಸ್ಸಿ ಪರೀಕ್ಷಾ ದಿನಾಂಕ ಪರಿಷ್ಕರಣೆ ಮಾಡುವುದು ಸೂಕ್ತ ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News