ಕ್ರಿಕೆಟ್ ಬೆಟ್ಟಿಂಗ್: ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

Update: 2020-11-15 13:48 GMT

ಕಲಬುರ್ಗಿ, ನ. 15: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಸಂಬಂಧ ಕಲಬುರಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಸವರಾಜ ಮತ್ತಮೂಡ ಅವರ ಪತ್ನಿ ಕಾರು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಶಾಸಕರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಆಗ್ರಹಿಸಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದೆ. ಹೀಗಾಗಿ ಸರಕಾರದ ಕುಮ್ಮಕ್ಕಿನಿಂದಲೇ ಕಲಬುರಗಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಸ್ವತಃ ಶಾಸಕರೇ ದಂಧೆಗೆ ಬೆಂಬಲವಾಗಿ ನಿಂತಿರುವುದು ಅವರ ಪತ್ನಿ ಕಾರು ವಶಪಡಿಸಿಕೊಂಡಿರುವುದರಿಂದ ಗೊತ್ತಾಗುತ್ತದೆ. ಸೋಲಾಪುರ ಸಿಸಿಬಿ ಪೊಲೀಸರ ದಾಳಿ ಬಳಿಕ ಶಾಸಕ ಬಸವರಾಜ ಮತ್ತಿಮೂಡ ಅವರ ಕೃತ್ಯ ಬೆಳಕಿಗೆ ಬಂದಿದೆ ಎಂದರು.

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಶಾಸಕರ ಪತ್ನಿಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷಾಂತರ ರೂಪಾಯಿ ನಗದು, ಲ್ಯಾಪ್ ಟಾಪ್, ಮೊಬೈಲ್, ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಯಂತ್ರೋಪಕರಣ ಜಪ್ತಿ ಮಾಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸ್ಥಳೀಯ ಪೊಲೀಸರಿಂದಲೂ ಬೆಟ್ಟಿಂಗ್ ದಂಧೆಗೆ ಬೆಂಬಲವಿದೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆಂದು ಹೇಳಿದರು.

ಹೋರಾಟ: ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಸಿಲುಕಿರುವ ಬಸವರಾಜ ಮತ್ತಿಮೂಡ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಕಾಂಗ್ರೆಸ್ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದ ವಿಜಯಕುಮಾರ್, ಶಾಸಕ ಮತ್ತಿಮೂಡ ಅವರ ಹತ್ತಿರ ಸಂಬಂಧಿ ಗೋರಖನಾಥ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಕೃತ್ಯದಲ್ಲಿ ಶಾಸಕರ ಪಾತ್ರ ಇರುವುದು ಸ್ಪಷ್ಟ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News