ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿಗೆ ಸೂಕ್ತ ನಿರ್ಧಾರ ಕೈಗೊಳ್ಳಿ: ಹೊರಟ್ಟಿ ಒತ್ತಾಯ

Update: 2020-11-15 13:51 GMT

ಬೆಂಗಳೂರು, ನ. 15: ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಬೇಕೆಂದು ಲಿಂಗಾಯತರ ಹೋರಾಟ ವೇದಿಕೆ ಒತ್ತಾಯಿಸುತ್ತಲೇ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಕ್ತ ನಿರ್ಧಾರ ಶೀಘ್ರವಾಗಿ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಶೇ.16 ರಷ್ಟು ಮೀಸಲಾತಿಯನ್ನು ಅಲ್ಲಿನ ಸರಕಾರ ನೀಡಿದೆ. ಇದರಿಂದ ಆ ಸಮುದಾಯ ಎಲ್ಲ ರೀತಿಯ ಅನುಕೂಲತೆಗಳನ್ನು ಪಡೆಯುತ್ತಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಿರುವ ಲಿಂಗಾಯತರಿಗೆ ಶೇ.16 ರಷ್ಟು ಮೀಸಲಾತಿಯನ್ನು ಕೊಡುವುದು ನ್ಯಾಯೋಚಿತವಾಗಿದೆ ಎಂದು ತಿಳಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ಮುಖ್ಯಮಂತ್ರಿ ಪದವಿ ಸಿಕ್ಕಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಿಂಗಾಯತರಿಗೆ ಶೇ.16 ಮೀಸಲಾತಿಯನ್ನು ಕಲ್ಪಿಸಲೇಬೇಕೆಂಬುದು ಸಮಸ್ತ ಲಿಂಗಾಯತರ ಬೇಡಿಕೆಯಾಗಿದೆ. ಬೇರೆ ಬೇರೆ ಸಮುದಾಯದವರು ತಮಗೆ ಹೆಚ್ಚು ಮೀಸಲಾತಿಯನ್ನು ಕೊಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಗಳು ನ್ಯಾಯಯುತವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ತಮಿಳುನಾಡು ಮತ್ತು ಹರ್ಯಾಣ ಮೊದಲಾದ ಬೇರೆ ಬೇರೆ ರಾಜ್ಯಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿದ್ದಾರೆ. ಲಿಂಗಾಯತರಲ್ಲಿಯೂ ಶೇ.100ರಲ್ಲಿ ಶೇ.70ರಷ್ಟು ಬಡವರು, ಕೂಲಿಕಾರರು ಇದ್ದಾರೆ. ಲಿಂಗಾಯತ ಸಮಾಜವು ಕೃಷಿಯ ಮೇಲೆ ಬದುಕಿದ್ದಾರೆ. ಹೀಗಾಗಿ ನೆರೆ ಹಾವಳಿ, ಬರಗಾಲ, ಬೆಲೆಕುಸಿತದಿಂದ ಸದಾ ಕಷ್ಟವನ್ನೇ ಅನುಭವಿಸುತ್ತಿರುವ ಈ ಸಮಾಜಕ್ಕೆ ಮೀಸಲಾತಿ ಕೊಡುವುದು ನ್ಯಾಯಯುತವಾದುದ್ದೆಂದು ಅವರು ಅಭಿಪ್ರಾಯಿಸಿದ್ದಾರೆ. 

ಕರ್ನಾಟಕದಲ್ಲಿರುವ ಹಿಂದೂ ಮರಾಠಾ ಸಮಾಜಕ್ಕೆ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಸಮಸ್ತ ಲಿಂಗಾಯತರ ವೇದಿಕೆ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಇದು ಆ ಸಮುದಾಯದ ಬಹಳ ದಿನಗಳ ಬೇಡಿಕೆಯಾಗಿತ್ತು.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಟ್ಟಿ ನಿಲುವು ತಾಳಿ ಅದನ್ನು ಈಡೇರಿಸಿದ್ದಕ್ಕೆ ಅಭಿನಂದನೆಗಳು'

-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News