ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ: ಎಸ್‍ಡಿಪಿಐ ಖಂಡನೆ

Update: 2020-11-15 13:54 GMT

ಬೆಂಗಳೂರು, ನ. 15: ಪಿಎಚ್‍ಡಿ ಹಾಗೂ ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರವು ನೀಡುತ್ತಿದ್ದ ಫೆಲೋಶಿಫ್ ಹಣದ ಪ್ರಮಾಣವನ್ನು ಕೊರೋನ ನೆಪವೊಡ್ಡಿ ಇಳಿಕೆ ಮಾಡಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಖಂಡಿಸಿದೆ.

ಸರಕಾರವು ಅಲ್ಪಸಂಖ್ಯಾತ ವಿದ್ಯಾರ್ಥಿಗಿಗೆ ವರ್ಷಕ್ಕೆ ಮೂರು ಲಕ್ಷ ರೂ.ಗಳಷ್ಟು ಫೆಲೋಶಿಪ್ ನೀಡಲಾಗುತ್ತಿತ್ತು. ಆದರೆ, ಇದೀಗ ಕೋವಿಡ್ ಕಾರಣ ನೀಡಿ ಆ ಮೊತ್ತವನ್ನು ಒಂದು ಲಕ್ಷಕ್ಕೆ ಇಳಕೆ ಮಾಡಿರುವ ಕ್ರಮ ಸರಿಯಲ್ಲ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಿರುವುದು ಒಂದು ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿದಂತೆ ಎಂದು ಎಸ್‍ಡಿಪಿಐ ತಿಳಿಸಿದೆ.

ಪಿಎಚ್‍ಡಿ ಮಾಡುವವರಿಗೆ ಮೂರು ವರ್ಷ, ಎಂ.ಫಿಲ್ ಮಾಡುವವರಿಗೆ ಎರಡು ವರ್ಷಗಳ ಕಾಲ ತಿಂಗಳಿಗೆ 25 ಸಾವಿರದಂತೆ ಈ ಫೆಲೋಶಿಪ್ ಹಣವನ್ನು ಸರಕಾರದಿಂದ ನೀಡಬೇಕಿದೆ. ಆದರೆ, ಕಳೆದ 10 ತಿಂಗಳಿನಿಂದ ಆ ಹಣವನ್ನು ನೀಡಿಲ್ಲ. ಇದೀಗ ಏಕಾಏಕಿ ಕಡಿತಗೊಳಿಸಿ ಆದೇಶಿಸಿರುವುದು ಖಂಡನೀಯ. ಬಿಜೆಪಿ ಸರಕಾರ ಆರಂಭದಿಂದಲೂ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕಡಿತಗೊಳಿಸುತ್ತಿದ್ದು, 2020-21 ನೇ ಸಾಲಿನಲ್ಲಿಯೂ ಶೇ.44 ರಷ್ಟು ಅನುದಾನ ಕಡಿತ ಮಾಡಲಾಗಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಸರಕಾರದ ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ ಕಾರಣ ಖಜಾನೆ ಖಾಲಿಯಾಗಿದೆ. ಇದನ್ನು ಭರಿಸಲು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮಾಡಿ ಖಜಾನೆ ತುಂಬಿಸಲು ಹೊರಟಿರುವ ನಡೆ ಸಲ್ಲ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಯೋಜನೆಗಳಲ್ಲಿ ತಾರತಮ್ಯ ಎಸಗುವುದು ಸರಿಯಲ್ಲ. ಹೀಗಾಗಿ, ಕೂಡಲೇ ಬಾಕಿ ಉಳಿದಿರುವ ಫೆಲೋಶಿಪ್ ಹಣ ನೀಡುವುದರ ಜೊತೆ  ಎಂದಿನಂತೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರ್ಥಿಕ ಸಹಾಯ ಮುಂದುವರಿಸಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News