ಅಕ್ರಮಗಳಿಗೆ ಹೆಸರುವಾಸಿಯಾದ ಕೆಪಿಎಸ್‌ಸಿಯನ್ನು ರದ್ದುಗೊಳಿಸುವ ಅವಶ್ಯಕತೆ ಇದೆ: ಹೈಕೋರ್ಟ್

Update: 2020-11-15 15:58 GMT

ಬೆಂಗಳೂರು, ನ. 15: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡುವಲ್ಲಿ ವಿಫಲವಾಗಿರುವ ಕರ್ನಾಟಕ ಲೋಕಾಸೇವಾ ಆಯೋಗವನ್ನು ರದ್ದುಗೊಳಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೆಪಿಎಸ್‌ಸಿ ಅಕ್ರಮಗಳಿಗೆ ಹೆಸರು ವಾಸಿಯಾಗಿದೆ ಎಂದು ಹೇಳಿದೆ.

1998, 1999 ಮತ್ತು 2004ನೆ ಸಾಲಿನ ಕೆಎಎಸ್ ನೇಮಕಾತಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಕರ್ನಾಟಕ ಲೋಕಸೇವಾ ಆಯೋಗ ಮತ್ತು ಸರಕಾರಗಳಿಗೆ ಈವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಾದರೂ ನೇಮಕ ವ್ಯವಸ್ಥೆ ಸರಿಹೋಗಬೇಕು ಎಂದರೆ ಆಯೋಗವನ್ನು ರದ್ದು ಮಾಡುವುದು ಎಲ್ಲ ರೀತಿಯಲ್ಲೂ ಸೂಕ್ತ ಮತ್ತು ನ್ಯಾಯಯೋಚಿತ. ರಾಜ್ಯದ ಘನತೆ ಉಳಿಯಬೇಕಿದ್ದರೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಯುಪಿಎಸ್‍ಸಿ ಮಾದರಿಯಲ್ಲಿ ಹೊಸ ಪದ್ಧತಿಯನ್ನು ಜಾರಿ ಮಾಡುವುದು ಉತ್ತಮ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

1998ನೆ ಸಾಲಿನ ಕೆಎಎಸ್ ನೇಮಕಾತಿ ಅಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ವಿಲೇವಾರಿ ಮಾಡಿ ಹೊರಡಿಸಿರುವ ಆದೇಶದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

1998, 1999 ಹಾಗೂ 2004ನೆ ಸಾಲಿನ ನೇಮಕಾತಿಗಳು ಕಾನೂನುಬದ್ಧವಲ್ಲ ಎಂದು ಹೈಕೋರ್ಟ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಆದರೂ ವ್ಯವಸ್ಥೆ ಸರಿಪಡಿಸುವ ಕೆಲಸವಾಗಿಲ್ಲ. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದಿರುವ ಕಾರಣದಿಂದಾಗಿಯೇ ಅನರ್ಹರು ಇಂದು ವಿವಿಧ ಹುದ್ದೆಗಳನ್ನು ಪಡೆದಿದ್ದಾರೆ. ರಾಜ್ಯದ ಆಡಳಿತ ಸೇವೆಯಲ್ಲಿರುವ ಇಂತಹ ಕಳಂಕಿತ ಅಧಿಕಾರಿಗಳಿಂದ ಜನರು ನ್ಯಾಯ ನಿರೀಕ್ಷಿಸಲು ಸಾಧ್ಯವೇ ಎಂದು ಹೈಕೋರ್ಟ್ ವ್ಯವಸ್ಥೆಯ ಹುಳುಕುಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದೆ.

ಸರಕಾರಗಳಿಗೆ ನಿಜಕ್ಕೂ ಸಾರ್ವಜನಿಕ ಹಿತಾಸಕ್ತಿ ಇದ್ದಿದ್ದರೆ ಪ್ರಾಮಾಣಿಕರು, ದಕ್ಷರು ಹಾಗೂ ಅರ್ಹ ವ್ಯಕ್ತಿಗಳನ್ನು ನೇಮಕ ಮಾಡಲು ಆಯೋಗಕ್ಕೆ ಸೂಚಿಸುತ್ತಿದ್ದವು. ಅದಕ್ಕಾಗಿ ಆಯೋಗಕ್ಕೆ ದಕ್ಷರು ಮತ್ತು ಪ್ರಮಾಣಿಕರನ್ನು ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸುತ್ತಿದ್ದವು. ಆ ಮೂಲಕ ರಾಜ್ಯದ ಆಡಳಿತ ಸೇವೆಗೆ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳುತ್ತಿದ್ದವು. ಆದರೆ ಸರಕಾರಗಳಿಗೆ ಜನರ ಹಿತಾಸಕ್ತಿ ಮುಖ್ಯವಾಗಿರುವಂತೆ ಕಾಣುತ್ತಿಲ್ಲ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಮಧ್ಯಂತರ ಅರ್ಜಿಗಳಲ್ಲಿ ವೈಯಕ್ತಿಕ ವಿಚಾರಗಳಿರುವುದನ್ನು ಗಮನಿಸಿರುವ ಪೀಠ, ಇವುಗಳನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮುಂದಿಟ್ಟು ಪರಿಹಾರ ಕಂಡುಕೊಳ್ಳಬಹುದು ಎಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News