ಉಜ್ಜಯಿನಿ ಪೀಠಾಧ್ಯಕ್ಷರ ನೇಮಕ ವಿವಾದ: ಬಿಗಿ ಪೊಲೀಸ್ ಬಂದೋಬಸ್ತ್

Update: 2020-11-15 16:29 GMT

ಬಳ್ಳಾರಿ, ನ.15: ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಪೀಠಾಧ್ಯಕ್ಷರ ನೇಮಕ ವಿವಾದದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಂಭಾಪುರಿ ಪೀಠಾಧ್ಯಕ್ಷರ ಸಮಕ್ಷಮದಲ್ಲಿ ಮುಕ್ತಿ ಮಂದಿರದಲ್ಲಿ ಶುಕ್ರವಾರ ಸಭೆ ನಡೆದಿದ್ದು, ಉಜ್ಜಯಿನಿ ಪೀಠಕ್ಕೆ ನೂತನವಾಗಿ ತ್ರಿಲೋಚನಾ ಸ್ವಾಮೀಜಿ ಅವರನ್ನು ಘೋಷಣೆ ಮಾಡಿದ್ದಾರೆ. ಅದಕ್ಕೆ ಅಪಸ್ವರ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೀಠದಲ್ಲಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್: ಮುಕ್ತಿ ಮಂದಿರದಲ್ಲಿ ಶುಕ್ರವಾರ ಘೋಷಿಸಲಾಗಿರುವ ಸ್ವಾಮೀಜಿ ವಿಷಯಕ್ಕೆ ಸಂಬಂಧಿಸಿದಂತೆ ಪೀಠದಲ್ಲಿ ಭಕ್ತರಿಂದ ಆಕ್ರೋಶದ ಮಾತುಗಳು ಕೇಳಿಬಂದವು. ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಅನಾಮಧೇಯ ಸ್ವಾಮೀಜಿ ಬರಬಹುದು ಎಂದು ದೂರು ದಾಖಲಾಗಿದ್ದು, ದೂರಿನ ಮೇರೆಗೆ ಕೊಟ್ಟೂರು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಡಿವೈಎಸ್ಪಿ, ಸರ್ಕಲ್ ಇನ್‍ಸ್ಪೆಕ್ಟರ್, 4 ಪಿಎಸ್‍ಐ, 7 ಎಎಸ್‍ಐಗಳು ಹಾಗೂ 25 ಪೊಲೀಸ್ ಕಾನ್‍ಸ್ಟೇಬಲ್‍ಗಳು ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೀಠದಲ್ಲಿ ಯಾವುದೇ ಗದ್ದಲ, ಗಲಾಟೆಗಳಾಗದಂತೆ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದ ಮೇರೆಗೆ ಈ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಕೊಟ್ಟೂರು ಸರ್ಕಲ್ ಇನ್‍ಸ್ಪೆಕ್ಟರ್ ಎಚ್.ದೊಡ್ಡಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News