ಚಿಕ್ಕಮಗಳೂರು: ವರ್ಷ ಕಳೆದರೂ ನಡೆಯದ ನಗರಸಭೆ ಚುನಾವಣೆ

Update: 2020-11-15 16:40 GMT

ಚಿಕ್ಕಮಗಳೂರು, ನ.15: ಇಲ್ಲಿನ ನಗರಸಭೆ ವಾರ್ಡ್‍ಗಳ ಮೀಸಲು ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ನಗರಸಭೆಗೆ ಚುನಾವಣೆ ನಡೆಯದೇ ಒಂದೂವರೆ ವರ್ಷ ಸಮೀಪಿಸುತ್ತಿದ್ದು, ಜನಪ್ರತಿನಿಧಿಗಳಿಲ್ಲದೇ ನಗರದ ಅಭಿವೃದ್ಧಿಗೆ ಸಮಸ್ಯೆ ಎದುರಾಗಿದೆ. ಜನಪ್ರತಿನಿಧಿಗಳಿಲ್ಲದ ನಗರಸಭೆ ಆಡಳಿತದಿಂದಾಗಿ ನಾಗರಿಕರ ಸಮಸ್ಯೆಗಳು ಬಗೆಹರಿಯದಂತಾಗಿದ್ದು, ಅಧಿಕಾರಿಗಳು ತೆಗೆದುಕೊಂಡ ನಿರ್ಣಯಗಳಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಯ ಪಾತ್ರ ಮಹತ್ವದಾಗಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳ ನಿರ್ಣಯ ಕೈಗೊಳ್ಳಲು ನಗರಸಭೆಯಲ್ಲಿ ಜನಪ್ರತಿನಿಧಿಗಳಿಲ್ಲದಿರುವುದು ನಗರದ ಅಭಿವೃದ್ಧಿ ಹಿನ್ನಡೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ 35 ವಾರ್ಡ್‍ಗಳನ್ನು ಹೊಂದಿದ್ದು, ಒಂದೊಂದು ವಾರ್ಡ್‍ಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ನಗರಸಭೆಯಲ್ಲಿ ಜನಪ್ರತಿನಿಧಿಗಳಿಲ್ಲದೇ ತಮ್ಮ ವಾರ್ಡ್‍ಗಳಲ್ಲಿರುವ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂಬುದು ಸ್ಥಳೀಯ ನಿವಾಸಿಗಳಿಗೆ ತಿಳಿಯದಂತಾಗಿದೆ. 

ಜನಪ್ರತಿನಿಧಿಗಳಿಲ್ಲದೆ ನಗರಸಭೆ ಆಡಳಿತ ಯಂತ್ರ ಕುಸಿದಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ. ನಗರಸಭೆ ಆಯುಕ್ತರು ಚಟುವಟಿಕೆಯಿಂದ ನಗರಸಭೆ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೂ ಕೂಡ ಅಧಿಕಾರಿಗಳು ಮತ್ತು ಸಿಬ್ಬಂದಿಯದ್ದೇ ಆಡಳಿತವಾಗಿದ್ದು, ಹಣವಿಲ್ಲದೇ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲವೆಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ. ತಮ್ಮ ತಮ್ಮ ವಾರ್ಡ್‍ಗಳ ಸಮಸ್ಯೆಗಳನ್ನು ನಗರಸಭೆ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕಿದ್ದ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಅನೇಕ ಬಡಾವಣೆಗಳು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. 

ನಗರದಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ ಸೇರಿದಂತೆ ಅನೇಕ ಕಳಪೆ ಕಾಮಗಾರಿಗಳು ನಡೆದರು ಪ್ರಶ್ನಿಸುವವರ ದಿಕ್ಕಿಲ್ಲದಂತಾಗಿದೆ. ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆ (ಅಮೃತ್ ಯೋಜನೆ) ಯುಜಿಡಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿಗಳಿಗೆ ಚುರುಕು ಮುಟ್ಟಿಸಬೇಕಾದ ಜನಪ್ರತಿನಿಧಿಗಳಿಲ್ಲದೇ ಕಳೆದ ಒಂದೂವರೆ ವರ್ಷದಿಂದ ನಗರಸಭೆ ಅನಾಥವಾದಂತಿದೆ. ವಾರ್ಡ್ ಮೀಸಲಾತಿ ಸಂಬಂಧ ಹಿಂದಿನ ಜನಪ್ರತಿನಿಧಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಶೀಘ್ರವೇ ಸಮಸ್ಯೆ ಪರಿಹರಿಸಿ ನಗರಸಭೆ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಯಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ. 

ಹಿಂದಿನ ಜನಪ್ರತಿನಿಧಿಗಳ ಆಡಳಿತ ಮಂಡಳಿಯ ಅವಧಿ ಮುಗಿದ ನಂತರ ನಗರಸಭೆಗೆ ಚುನಾವಣೆ ನಡೆಯದಿರುವುದರಿಂದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸುಮಾರು ಒಂದುವರೆ ವರ್ಷದಿಂದ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೂ ನಗರಸಭೆಗೆ ಒಮ್ಮೆಯೂ ನಗರಸಭೆಗೆ ಭೇಟಿನೀಡಿಲ್ಲ, ಯಾವುದೇ ವಾರ್ಡ್‍ಗೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿಲ್ಲ, ನಗರಸಭೆಗೆ ಅನಿರೀಕ್ಷಿತ ಬೇಟಿನೀಡಿ ನಗರಸಭೆ ಸಿಬ್ಬಂದಿ ಮೇಲ್ವಿಚಾರಣೆ ಮಾಡಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನಗರಸಭೆ ಜನಪ್ರತಿಗಳಿಲ್ಲದೇ ಒಂದೂವರೆ ವರ್ಷ ಕಳೆದಿದೆ. ಸರಕಾರದಿಂದ ದೊಡ್ಡ ಅನುದಾನಗಳು ಬರುತ್ತಿಲ್ಲ, ನಗರದಲ್ಲಿ ಅನೇಕ ಸಮಸ್ಯೆಗಳಿದ್ದು, ಸಾರ್ವಜನಿಕರು ಯಾರನ್ನು ಪ್ರಶ್ನಿಸಬೇಕು ಎಂದು ತಿಳಿಯದಂತಾಗಿದೆ. ನಗರಸಭೆಗೆ ಶೀಘ್ರ ಚುನಾವಣೆ ನಡೆಸುವುದೇ ಇದಕ್ಕಿರುವ ಪರಿಹಾರವಾಗಿದೆ.
-ರೂಬಿನ್ ಮೊಸೆಸ್, ನಗರಸಭೆ ಮಾಜಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News