'ನಾಗರಹಾವು' ಸಿನಿಮಾದ ಜಲೀಲ ನೆನಪಾಗಿ ಸುಮಲತಾ ಫಿಲ್ಮಿ ಡೈಲಾಗ್ ಹೊಡೆದಿದ್ದಾರೆ: ಪ್ರತಾಪ್ ಸಿಂಹ
ಮೈಸೂರು, ನ.17: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಾಳೇಗಾರಿಕೆ ಮನಸ್ಥಿತಿಗೆ ಜಾಗ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾ ಅಂಬರೀಶ್ ಗೆ ತಿರುಗೇಟು ನೀಡಿದರು.
ನಗರದ ಜಿಪಂ ಆವರಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಆವರು, ಅಂಬರೀಶ್ ಇದ್ದಾಗ ಯಾರು ಮಾತನಾಡುತ್ತಿರಲಿಲ್ಲ ಎಂಬ ಸುಮಲತ ಹೇಳಿಕೆಗೆ ವಾಗ್ದಾಳಿ ನಡೆಸಿದರು.
ಒಬ್ಬ ಚಪ್ಪಲಿ ಹೊಲೆಯುವವನ ಮಗ ಅಬ್ರಹಾಂ ಲಿಂಕನ್ ಅಮೆರಿಕ ಅಧ್ಯಕ್ಷನಾದ, ಚಾಯ್ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿದ್ದಾರೆ. ಪ್ರಜಾತಂತ್ರದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದು ಬಿಟ್ಟು ನನ್ನ ಕುಟುಂಬ ಅದು ಇದು ಎಂದು ಹೇಳುವ ಪಾಳೇಗಾರಿಕೆ ಮನಸ್ಥಿತಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜಾಗ ಇಲ್ಲ ಎಂದು ಹರಿಹಾಯ್ದರು.
ಪ್ರತಾಪ್ ಸಿಂಹ ಪೇಟೆ ರೌಡಿ ಎಂಬ ಸುಮಲತಾ ಹೇಳಿಕೆಗೆ ಕುರಿತು ಮಾತನಾಡಿದ ಅವರು, ಸುಮಲತಾ ಸಿನಿಮಾ ಜಗತ್ತು ಮತ್ತು ಬಣ್ಣದ ಲೋಕದಿಂದ ಬಂದವರು. ಅವರನ್ನು ಮಾಧ್ಯಮದವರಾದ ನೀವು ಕೆಣಕಿರುತ್ತೀರಿ, ಅದಕ್ಕೆ ಅವರು 'ನಾಗರಹಾವು' ಸಿನಿಮಾದ ಜಲೀಲ ನೆನಪಾಗಿ ಫಿಲ್ಮಿ ಡೈಲಾಗ್ ಹೊಡೆದಿದ್ದಾರೆ. ಅದನ್ನು ಗಂಭಿರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಕೊಡಗಿನ ರಸ್ತೆ ಬಗ್ಗೆ ಸಂಸದರು ಮಾತನಾಡಿದ್ದಾರೆ. ಅವರಿಗೆ ಗ್ರಾಪಂ, ತಾಪಂ, ಜಿಪಂ, ವ್ಯಾಪ್ತಿಗೆ ಯಾವವುದು ಬರಲಿದೆ ಶಾಸಕರು ಮತ್ತು ಸಂಸದರ ವ್ಯಾಪ್ತಿಗೆ ಯಾವ ರಸ್ತೆ ಬರಲಿದೆ ಎಂಬ ಕನಿಷ್ಠ ಜ್ಞಾನ ಇದ್ದರೆ ಇಂತಹ ಅಪದ್ಧವಾದ ಹೇಳಿಕೆ ನೀಡುವುದಿಲ್ಲ ಎಂದು ಮೂದಲಿಸಿದರು.
ನನಗೆ ಅಭಿವೃದ್ದಿಯಷ್ಟೇ ಮುಖ್ಯ ನಾನು ಬಸವಣ್ಣ ನವರ ಕಾಯಕವೇ ನಿಷ್ಠೆ ಎಂಬುದರಲ್ಲಿ ನಂಬಿಕೆ ಇಟ್ಟವನು, ನಾನು ಯಾವ ಸ್ಟಾರ್ ಅಲ್ಲ, ನನಗೆ ಅಭಿಮಾನಿಗಳು ಬಂದು ಓಟು ಹಾಕುವುದಿಲ್ಲ, ಅಭಿವೃದ್ದಿಯಷ್ಟೇ ನನ್ನ ಕೈಹಿಡಿಯುವುದು ಎಂದು ಹೇಳಿದರು.