ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ: ಕನ್ನಡ ಪರ ಸಂಘಟನೆಗಳಿಂದ ಡಿ.5ಕ್ಕೆ 'ಕರ್ನಾಟಕ ಬಂದ್' ಕರೆ

Update: 2020-11-17 12:30 GMT

ಬೆಂಗಳೂರು, ನ. 17: ರಾಜ್ಯ ಸರಕಾರ ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ' ರಚನೆ ತೀರ್ಮಾನವನ್ನು ನ.27ರ ಒಳಗಾಗಿ ಹಿಂಪಡೆಯದಿದ್ದರೆ ಡಿ.5ಕ್ಕೆ ಕರ್ನಾಟಕ ಬಂದ್ ಕರೆ ನೀಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಇಂದಿಲ್ಲಿ ಎಚ್ಚರಿಕೆ ನೀಡಿವೆ.

ಮಂಗಳವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮರಾಠಾ ಪ್ರಾಧಿಕಾರ ರಚನೆ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮರಾಠಿಗರ ಓಲೈಕೆ ಮಾಡುವ ಉದ್ದೇಶದಿಂದಲೇ ಮರಾಠಾ ಪ್ರಾಧಿಕಾರ ರಚನೆಗೆ ಮುಂದಾಗಿದ್ದು, ಇದು ಕನ್ನಡ ಭಾಷೆಗೆ ಮಾಡುವ ದ್ರೋಹ ಎಂದು ಕಿಡಿಕಾಡಿದರು.

ತಮಿಳು, ತೆಲುಗು, ಮಲಯಾಳಿ, ಗುಜರಾತಿ ಸೇರಿದಂತೆ ಎಲ್ಲ ಭಾಷೆಗಳಿಗೂ ಪ್ರಾಧಿಕಾರ ರಚನೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ಧತೆ ಮಾಡಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯದಲ್ಲಿ ಕನ್ನಡಗರಿಗೆ ಮತ್ತು ಕನ್ನಡ ಭಾಷೆಗೆ ಕಂಟಕ ಎದುರಾಗಲಿದೆ ಎಂದು ಎಚ್ಚರಿಸಿದ ಅವರು, ಬಿಜೆಪಿ ಸರಕಾರ ಕನ್ನಡ ವಿರೋಧಿ ಧೋರಣೆ ಕೈಬಿಡದಿದ್ದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವವರೆಗೂ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಸರಕಾರಕ್ಕೆ ನ.27ರವರೆಗೆ ಗಡುವು ನೀಡುತ್ತೇವೆ. ಅಷ್ಟರೊಳಗೆ ಮರಾಠಾ ಪ್ರಾಧಿಕಾರ ರಚನೆ ತೀರ್ಮಾನದಿಂದ ಹಿಂದೆ ಸರಿಯದಿದ್ದರೆ ಡಿ.5ರಂದು ಕರ್ನಾಟಕ ರಾಜ್ಯ ಬಂದ್ ಮಾಡಿ ಕನ್ನಡಿಗರ ಸಾಮರ್ಥ್ಯ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ವಾಟಾಳ್ ನಾಗರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರಕಾರ ಕೇವಲ 5 ಕೋಟಿ ರೂಪಾಯಿ ಅನುದಾನ ನೀಡಿದೆ. ಆದರೆ, ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ 50 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಟೀಕಿಸಿದರು.

‘ಮರಾಠಾ ಅಭಿವೃದ್ಧಿ ಪ್ರಾಧಿಕಾರ'ವನ್ನು ಸರಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಮುಖಂಡರು, ಮಹಿಳಾ ಮುಖಂಡರೊಂದಿಗೆ ಸಭೆ ನಡೆಸಿ ಹೋರಾಟದ ಬಗ್ಗೆ ಸಮಾಲೋಚನೆ ನಡೆಸುತ್ತೇವೆ. ಆ ಬಳಿಕ ಡಿ.5ಕ್ಕೆ ಕರ್ನಾಟಕ ಬಂದ್ ಕರೆ ನೀಡಲು ಮುಂದಾಗುತ್ತೇವೆ ಎಂದರು.

ಭೂತ ದಹನ: ಮರಾಠಾ ಅಭಿವೃದ್ದಿ ಪ್ರಾಧಿಕಾರ ರಚನೆ ತೀರ್ಮಾನವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕನ್ನಡ ಒಕ್ಕೂಟ ಕರ್ನಾಟಕ ನೇತೃತ್ವದಲ್ಲಿ ರಾಜ್ಯ ಸರಕಾರದ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ನಡೆಸಲು ಮುಂದಾದ ಮುಖಂಡರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಮುಖಂಡರು ಹಾಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವು, ಕನ್ನಡ ಪರ ಹೋರಾಟಗಾರ ಗಿರೀಶ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಪಾಲನೇತ್ರ, ಪ್ರವೀಣ್‍ ಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

‘ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಅಥವಾ ಶಾಸನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಏಕಾಏಕಿ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾಧಿಕಾರ ರಚನೆ ಮಾಡಲಾಗಿದೆ. ಪ್ರಾಧಿಕಾರಿ ರಚನೆ ತೀರ್ಮಾನದಿಂದ ಹಿಂದೆ ಸರಿಯದಿದ್ದರೆ ಡಿ.5ಕ್ಕೆ ಕರ್ನಾಟಕ ಬಂದ್ ನಿಶ್ಚಿತ. ಕನ್ನಡಗರ ಹಿತದೃಷ್ಟಿಯಿಂದ ಬಂದ್ ಕರೆ ನೀಡಲಾಗಿದೆ.’

-ವಾಟಾಳ್ ನಾಗರಾಜ್, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News