ಕಾಂಗ್ರೆಸ್ ಸಂಪತ್ ರಾಜ್ ಪರವೋ, ಅಖಂಡ ಶ್ರೀನಿವಾಸ್ ಪರವೋ: ಸಚಿವ ಆರ್.ಅಶೋಕ್ ಪ್ರಶ್ನೆ

Update: 2020-11-17 13:06 GMT

ಬೆಂಗಳೂರು, ನ. 17: ದಲಿತ ಸಮುದಾಯದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಯಾವುದೇ ಕಳಕಳಿಯೂ ಇಲ್ಲ. ಕೇವಲ ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಲಿತ ಶಾಸಕನ ಮನೆ ಮೇಲೆ ದಾಳಿ ಆಗಿ ಕೊಲೆ ಪ್ರಯತ್ನ ನಡೆದಿತ್ತು. ಆದರೆ, ಘಟನೆಗೆ ಕಾರಣರಾದವರನ್ನು ಬಂಧಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಲಿಲ್ಲ. ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ನಿಜಬಣ್ಣ ಬಯಲಾಗಿದೆ ಎಂದು ಟೀಕಿಸಿದರು.

ನನಗೆ ಬೆಂಬಲ ನೀಡಿ, ನನಗೆ ಸೂಕ್ತ ನ್ಯಾಯ ಕೊಡಿಸಿ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಕಾಂಗ್ರೆಸ್ ನಾಯಕರ ಬಗ್ಗೆ ಬಹಿರಂಗ ಹೇಳಿಕೆ ನೀಡಿದರೂ ಕಾಂಗ್ರೆಸ್ ಪಕ್ಷದ ಮುಖಂಡರು ಸಹಾಯ ಮಾಡಲಿಲ್ಲ. ಮಾಜಿ ಮೇಯರ್ ಸಂಪತ್ ರಾಜ್ ಅವರ ಪರವೋ ಅಥವಾ ತಮ್ಮದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಪರವೋ ಎಂಬುದನ್ನು ಹೇಳಬೇಕು ಎಂದು ಅಶೋಕ್ ಟೀಕಿಸಿದರು.

ಕೇಂದ್ರದ ನೆರವು: ಕೇಂದ್ರ ಸರಕಾರದಿಂದ ನೆರೆ ಪರಿಹಾರಕ್ಕೆ ಈಗಾಗಲೇ 577 ಕೋಟಿ ರೂ.ಬಿಡುಗಡೆ ಮಾಡಿದ್ದು, ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ. ಮತ್ತಷ್ಟು ಪರಿಹಾರಕ್ಕೆ ಮನವಿ ಮಾಡುತ್ತೇವೆ ಎಂದ ಸಚಿವ ಆರ್.ಅಶೋಕ್, ನೆರೆ ಪೀಡಿತ ಜಿಲ್ಲೆಗಳಲ್ಲಿ ಮನೆ ಕಳೆದುಕೊಂಡವರು ಪರಿಹಾರ ಪಡೆದಿಲ್ಲ. ಸರಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ಸಂತ್ರಸ್ತರು ನೆರೆ ಪರಿಹಾರ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News