ರಾಜ್ಯದ ಹಿತಾಸಕ್ತಿಯೇ ಮುಖ್ಯ ಎನ್ನುವವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಏಕೆ ವಿರೋಧಿಸಲ್ಲ ?

Update: 2020-11-17 14:01 GMT

ಚಿಕ್ಕಮಗಳೂರು, ನ.17: ರಾಜ್ಯದಲ್ಲಿ ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದ ಏಳಿಗೆಗಾಗಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ತಪ್ಪೇನಿದೆ? ನಮಗೆ ಕರ್ನಾಟಕದ ಹಿತಾಸಕ್ತಿಯೇ ಮುಖ್ಯ ಎನ್ನುವವರು ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಪ್ರಾಧಿಕಾರ, ಇಲಾಖೆ ಏಕೆ ಬೇಕೆಂಬುದನ್ನೂ ಹೇಳಬೇಕು. ಈ ವಿಚಾರ ಮುಂದಿಟ್ಟುಕೊಂಡು ಕರ್ನಾಟಕ ಬಂದ್‍ಗೆ ಕರೆ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠ ಎಂಬುದು ಒಂದು ಸಮುದಾಯವಾಗಿದೆ. ರಾಜ್ಯದಲ್ಲಿ ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿರುವ ಎಲ್ಲ ಸಮುದಾಯದವರ ಅಭಿವೃದ್ದಿಗೆ ಆದ್ಯತೆ ನೀಡುವುದು ಸರಕಾರಗಳ ಜವಬ್ದಾರಿಯಾಗಿದೆ. ಈ ಕಾರಣಕ್ಕೆ ಸರಕಾರ ಈಗಾಗಲೇ ಅಲ್ಪಸಂಖ್ಯಾತರು, ಬೋವಿ, ಕಡುಗೊಲ್ಲ, ಅಂಬೇಡ್ಕರ್, ನೇಕಾರರೂ ಸೇರಿದಂತೆ ಹಲವಾರು ಸಮುದಾಯಗಳ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದೆ. ಅದರಂತೆ ಮರಾಠ ಸಮುದಾಯದ ಅಭಿವೃದ್ದಿಗೆ ಸದ್ಯ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರ ಮುಂದಾಗಿದೆ, ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ನಮಗೆ ಕರ್ನಾಟಕ ರಾಜ್ಯದ ಹಿತಾಸಕ್ತಿಯೇ ಮುಖ್ಯ ಎಂದು ಕೆಲವರು ಈಗ ಮಾತನಾಡುತ್ತಿದ್ದಾರೆ. ಅವರಿಗೆ ರಾಜ್ಯದ ಹಿತಾಸಕ್ತಿಯೇ ಮುಖ್ಯ ಎನ್ನುವವರು ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಪ್ರಾಧಿಕಾರ ಏಕೆ ಬೇಕು?, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಏಕೆ ಬೇಕು? ಎಂಬುದನ್ನು ಹೇಳಬೇಕು. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರದಲ್ಲಿ ತಪ್ಪು ಹುಡುಕುವವರು ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾದಾಗ ಏಕೆ ಸುಮ್ಮನಿದ್ದರು? ಟಿಪ್ಪು ಕನ್ನಡ ಪ್ರೇಮಿನಾ? ರಾಜ್ಯದ ನೂರಾರು ಊರುಗಳ ಕನ್ನಡದ ಹೆಸರುಗಳನ್ನು ಬದಲಾಯಿಸಿದ್ದೇ ಟಿಪ್ಪು. ಟಿಪ್ಪು ಜಯಂತಿ ಬಗ್ಗೆ ಚಕಾರ ಎತ್ತದವರು ಮರಾಠ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಅಪಸ್ವರ ಎತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಟೀಕಿಸಿದ ಸಿ.ಟಿ.ರವಿ, ಕರ್ನಾಟಕದಲ್ಲಿ ಕನ್ನಡ ಹಾಗೂ ಕನ್ನಡಿಗನೇ ಸಾರ್ವಭೌಮ, ಸಣ್ಣ ಸಮುದಾಯಗಳ ಏಳಿಗೆಗೆ ನಿಗಮ ಸ್ಥಾಪಿಸಿದರೆ ತಪ್ಪೇನೂ ಇಲ್ಲ ಎಂದರು.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬಂಧ ಕರ್ನಾಟಕ ಬಂದ್ ಕರೆ ನೀಡಿರುವುದರ ಹಿಂದೆ ರಾಜಕೀಯ ಪ್ರೇರಿತವಾಗಿದೆ. ಎಲ್ಲ ಜಾತಿ, ಧರ್ಮದವರ ಏಳಿಗೆಗಾಗಿ ನೂರಾರು ನಿಗಮ, ಪ್ರಾಧಿಕಾರಗಳನ್ನು ಸ್ಥಾಪನೆ ಮಾಡಲಾಗಿದೆ. ಆಗ ಪ್ರತಿಭಟನೆ, ಬಂದ್ ಮಾಡದವರು ಈಗ ಏಕೆ ಮಾಡಬೇಕು. ವಿರೋಧ ಮಾಡುವವರು ಎಲ್ಲ ವಿಚಾರಕ್ಕೂ ವಿರೋಧ ಮಾಡಲಿ, ಬೇರೆ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸ್ಥಾಪನೆಯನ್ನೂ ಬೇಡ ಎಂದು ಹೇಳಲಿ. ಒಂದು ಬೇಕು, ಮತ್ತೊಂದು ಬೇಡ ಎಂದರೆ ಹೇಗೆ? ಎಂದು ರವಿ ಪ್ರಶ್ನಿಸಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ರಾಜ್ಯದಲ್ಲಿ ಯಾವ ಯಾವ ನಿಗಮಗಳು ಇರಬೇಕು, ಇರಬಾರದೆಂಬುದು ವಿಧಾನಸಭೆಯಲ್ಲಿ ಚರ್ಚೆಯಾಗಬೇಕು. ಎಲ್ಲ ಜಾತಿಗೂ ನಿಗಮಗಳು ಬೇಕು ಎಂದು ತೀರ್ಮಾನವಾದರೇ ಆಗಲೀ, ಬೇಡ ಎಂದಾದರೆ ಬಿಡಲಿ. ಯಾವ ನಿಗಮವೂ ಬೇಡ ಎಂದು ತೀರ್ಮಾನವಾದರೆ ಎಲ್ಲವನ್ನೂ ರದ್ದು ಮಾಡಲಿ. ಚುನಾವಣೆಗೆ ಪಕ್ಷದಿಂದ ಟಿಕೆಟ್ ಕೊಡುವಾಗ ಜಾತಿ ನೋಡ್ತೀವಿ, ಮಂತ್ರಿ ಮಾಡುವಾಗ ಜಾತಿ ನೋಡ್ತೀವಿ, ಹೀಗಿದ್ದಾಗ ಒಂದು ಜಾತಿಯ ಪರ, ಮತ್ತೊಂದರ ವಿರೋಧ ಏಕೆ. ಜಾತ್ಯತೀತ ಪಕ್ಷ ಎನ್ನುವವರು ಟಿಕೆಟ್ ನೀಡುವಾಗ ಜಾತಿ ನೋಡುತ್ತಾರೋ, ಸಾಮರ್ಥ್ಯ ನೋಡುತ್ತಾರೋ ಎಂದು ಸಿ.ಟಿ.ರವಿ ಪರೋಕ್ಷವಾಗಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಎನ್‍ಯು ಹೆಸರು ಬದಲಾವಣೆ ಟ್ವೀಟ್ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಲಿ, ಆದರೆ ನಾನು ಈ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದಷ್ಟೇ ಹೇಳಿ ಜಾರಿಕೊಂಡರು.

ಸಂಪತ್ ರಾಜ್ ಬಂಧನ ಪ್ರಕರಣದಲ್ಲಿ ಕಾನೂನು ಅದರ ಕೆಲಸ ಮಾಡಿದೆ. ಸಂಪತ್ ರಾಜ್‍ಗೆ ಯಾರು ರಕ್ಷಣೆ ಕೊಟ್ಟಿದ್ದರು, ಯಾರು ಮುಚ್ಚಿಟ್ಟಿದ್ದರು ಎಂಬುದನ್ನು ಡಿಕೆಶಿ ಹೇಳಬೇಕು. ಕಾಂಗ್ರೆಸ್‍ನಲ್ಲಿನ ಎರಡು ಗುಂಪುಗಳ ಜಗಳದಿಂದಾಗಿ ದಲಿತ ಶಾಸಕನ ಮನೆಗೆ ಬೆಂಕಿ ಬೀಳುವಂತೆ ಮಾಡಿದೆ. ಶಾಸಕನ ಮನೆಗೆ ಬೆಂಕಿ ಹಾಕಲು ಒಂದು ನೆಪ ಬೇಕಿತ್ತು. ಅದನ್ನು ಬಳಸಿಕೊಂಡು ಬೆಂಕಿ ಹಾಕಿದ್ದಾರೆ. ಪರಿಣಾಮ ಅವರದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ. ಆದರೆ ಕಾನೂನು ಅದರ ಕೆಲಸ ಮಾಡಿದೆ.
- ಸಿ.ಟಿ.ರವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News