ಸಚಿವ ಸಂಪುಟ ವಿಸ್ತರಣೆ ಸನ್ನಿಹಿತ: ಬುಧವಾರ ಸಿಎಂ ಬಿಎಸ್‌ವೈ ಹೊಸದಿಲ್ಲಿಗೆ

Update: 2020-11-17 14:14 GMT

ಬೆಂಗಳೂರು, ನ.17: ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತ್ತು ವಿಧಾನಪರಿಷತ್ತಿನ ಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಂಬಂಧ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸಲು ಬುಧವಾರ ಹೊಸದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ನಗರದ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಬುಧವಾರ ಬೆಳಗ್ಗೆ 11.30ಕ್ಕೆ ವಿಶೇಷ ವಿಮಾನದ ಮೂಲಕ ಹೊಸದಿಲ್ಲಿಗೆ ತೆರಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಕಾಶ್ ಜಾವ್ಡೇಕರ್, ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಇನ್ನಿತರರೊಂದಿಗೆ ರಾಜ್ಯದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು, ನೆರೆ ಹಾವಳಿಗೆ ಪರಿಹಾರ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.

ಅಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿಯಾಗಿ ನೇಮಕವಾಗಿರುವ ಅರುಣ್ ಸಿಂಗ್ ಜೊತೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಂಬಂಧ ಚರ್ಚೆ ನಡೆಸಿ, ರಾತ್ರಿ 8.30ಕ್ಕೆ ಹೊಸದಿಲ್ಲಿಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ರಾತ್ರಿ 11.30ಕ್ಕೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಹಿಂದಿರುಗಲಿದ್ದಾರೆ.

ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಸಂತಸ: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹೊಸದಿಲ್ಲಿಗೆ ತೆರಳುತ್ತಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ. ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬುದು ವರಿಷ್ಠರ ತೀರ್ಮಾನದ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಸಚಿವ ಸಂಪುಟ ಪುನರ್ ರಚನೆ ಮಾಡುವುದಿದ್ದರೆ ಯಾರನ್ನೆಲ್ಲ ಕೈ ಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಬುಧವಾರ ಅಂತಿಮವಾಗುವ ಸಾಧ್ಯತೆಗಳಿವೆ.

ರಾಜೀನಾಮೆಗೆ ಸಿದ್ಧವಿರುವಂತೆ ಸಚಿವರಿಗೆ ಸೂಚನೆ?

ಹೊಸದಿಲ್ಲಿಗೆ ಪ್ರಯಾಣ ಬೆಳೆಸುವ ಮುನ್ನ ವಿಧಾನಸೌಧದಲ್ಲಿ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಒಂದು ವೇಳೆ ವರಿಷ್ಠರು ಸಚಿವ ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ತೋರಿಸಿದರೆ ನಾನು ಸೂಚಿಸುವ ಸಚಿವರು ರಾಜೀನಾಮೆ ನೀಡಲು ಸಿದ್ಧವಿರುವಂತೆ ಎಲ್ಲ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News