ಕೆಪಿಎಸ್‍ಸಿ ಪರೀಕ್ಷೆ ಒಂದು ತಿಂಗಳು ಮುಂದೂಡಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

Update: 2020-11-17 14:32 GMT

ಬೆಂಗಳೂರು, ನ.17: ಯುಪಿಎಸ್‍ಸಿ ಹಾಗೂ ಕೆಪಿಎಸ್‍ಸಿ ಪರೀಕ್ಷೆಗಳು ಏಕಕಾಲಕ್ಕೆ ನಿಗದಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನಿಸಿ ಒಂದು ತಿಂಗಳು ಕೆಪಿಎಸ್‍ಸಿ ಪರೀಕ್ಷೆಯನ್ನು ಮುಂದೂಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.

ಅನೇಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಮುಂದೂಡುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಎಂ ಬಿಎಸ್‍ವೈ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ತಿಂಗಳು ಕೆಪಿಎಸ್‍ಸಿ ಪರೀಕ್ಷೆಯನ್ನು ಮುಂದೂಡುವಂತೆ ಸೂಚನೆ ನೀಡಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಗಳು 2021ರ ಜ.8ರಿಂದ 10ರವರೆಗೆ ಹಾಗೂ 16, 17ರಂದು ನಿಗದಿಯಾಗಿತ್ತು. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳು 2020ರ ಡಿ.21ರಿಂದ 24 ಮತ್ತು ಜ.2ರಿಂದ 5ರವರೆಗೆ ನಿಗದಿಯಾಗಿವೆ.

ಕೆಪಿಎಸ್‍ಸಿ ಮತ್ತು ಯುಪಿಎಸ್‍ಸಿ ಪರೀಕ್ಷೆಗಳ ನಡುವೆ ಸಮಯ ಕಡಿಮೆ ಇರುವ ಕಾರಣ ಎರಡೂ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತದೆ. ಈ ಹಿನ್ನೆಲೆ ಅಭ್ಯರ್ಥಿಗಳು ಕೆಪಿಎಸ್‍ಸಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕೆಂದು ಮನವಿ ಮಾಡಿದ್ದರು.

ಈ ಹಿಂದೆಲ್ಲಾ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳ ಅವಧಿ ಅಂತರದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ 15 ದಿನಗಳ ಅಂತರ ಸಿಗುವುದೂ ಕಷ್ಟ. ಪರೀಕ್ಷೆ ಒತ್ತಡದಿಂದ ಅಭ್ಯರ್ಥಿಗಳಲ್ಲಿ ಆತ್ಮಸ್ಥೈರ್ಯ ಕುಗ್ಗಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ದಿನಾಂಕ ಗೊತ್ತುಪಡಿಸುವ ಬದಲು ಬಿಡುಗಡೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಭ್ಯರ್ಥಿಗಳು ಕೆಪಿಎಸ್‍ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News