‘ಮರಾಠಾ ಪ್ರಾಧಿಕಾರ ರಚನೆ' ಕನ್ನಡಿಗರ ಹಿತಕ್ಕೆ ಮಾರಕ: ಕನ್ನಡ ಸಂಘರ್ಷ ಸಮಿತಿ

Update: 2020-11-17 16:47 GMT

ಬೆಂಗಳೂರು, ನ. 17: ರಾಜ್ಯ ಸರಕಾರ ಯಾವುದೇ ಒತ್ತಾಯವೂ ಇಲ್ಲದೆ ‘ಮರಾಠಾ ಅಭಿವೃದ್ದಿ ಪ್ರಾಧಿಕಾರ' ರಚನೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ, ರಾಜ್ಯದ ರಾಜಕಾರಣಿಗಳು ಯಾವುದೇ ಪಕ್ಷದವರಿರಬಹುದು ಕನ್ನಡ ಮತ್ತು ಕನ್ನಡಿಗರ ಹಿತಕ್ಕೆ ಮಾರಕವಾಗುವ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಕನ್ನಡಿಗರ ಶಕ್ತಿ ಕುಂದುವಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕನ್ನಡಗರ ಸಮಸ್ಯೆಗಳನ್ನು ಪರಿಹರಿಸುವ ಯಾವ ದಿಟ್ಟ ಕ್ರಮಗಳೂ ಎದ್ದು ಕಾಣುತ್ತಿಲ್ಲ. ಅವರ ಕನ್ನಡ ಪ್ರೇಮ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗುತ್ತಿದೆ. ರಾಜ್ಯೋತ್ಸವ ತಿಂಗಳಲ್ಲೇ ಮರಾಠಾ ಪ್ರಾಧಿಕಾರ ರಚನೆ ತೀರ್ಮಾನ ಪ್ರಕಟಿಸುವ ಮೂಲಕ ಪರೋಕ್ಷವಾಗಿ ಸರಕಾರ ಕನ್ನಡಿಗರಿಗೆ ಸವಾಲು ಹಾಕಿದೆ. ಕನ್ನಡಿಗರೂ ಉಗ್ರ ನಿದ್ರಾವಸ್ಥೆಯಲ್ಲಿರುವುದು ರಾಜಕಾರಣಿಗಳಿಗೆ ವರವಾಗಿ ಪರಿಣಮಿಸಿದೆ ಎಂದು ದೂರಿದ್ದಾರೆ.

ಗೋಮಾಳವಾಗಿರುವ ಕನ್ನಡ ನಾಡಿನಲ್ಲಿ ತೊಂಡು ದನಗಳು ಪುಷ್ಕಳವಾಗಿ ಮೇಯುತ್ತಿವೆ. ಸರಕಾರಗಳು ಅವರು ಬಲಗೊಳ್ಳಲು ರತ್ನಗಂಬಳಿ ಹಾಸಿ ಕೊಡುತ್ತಿವೆ. ಮುಂದೆ ತಮಿಳು, ತೆಲುಗು, ಮಲಯಾಳಿ ಮೊದಲಾದ ಪ್ರಾಧಿಕಾರಗಳೂ ಆಗಬಹುದು. ಇಂಥ ತೀರ್ಮಾನಗಳಿಗೆ ಸಮಸ್ತ ಕನ್ನಡಿಗರ ಪರವಾಗಿ ಧಿಕ್ಕಾರ. ರಾಜ್ಯ ಸರಕಾರ ಕೂಡಲೇ ಮರಾಠಾ ಪ್ರಾಧಿಕಾರ ರಚನೆ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News