ನಾಮನಿರ್ದೇಶಿತ ಉಮೇಶ್ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ
ಮಂಡ್ಯ, ನ.17: ಕಾಂಗ್ರೆಸ್ ಬೆಂಬಲಿತ ಬಣಕ್ಕೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುಕ್ಕಾಣಿ ತಪ್ಪಿಸಲು ಬಿಜೆಪಿ ಜತೆ ಜೆಡಿಎಸ್ ವರಿಷ್ಠರು ಹೆಣೆದಿದ್ದ ತಂತ್ರ ಯಶಸ್ವಿಯಾಗಿದ್ದು, ರಾಜ್ಯ ಸರಕಾರದಿಂದ ನಾಮನಿರ್ದೇಶಿತ ಸದಸ್ಯ ಸಿ.ಪಿ.ಉಮೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಶೋಕ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬಣ ಚುನಾವಣೆಯನ್ನು ಬಹಿಷ್ಕರಿಸಿತು. ತದನಂತರ ಎದುರಾಳಿ ಬಣದ ಅಭ್ಯರ್ಥಿಗಳ ಗೆಲುವನ್ನು ಚುನಾವಣಾಧಿಕಾರಿ ಕುಮುದ ಅವರು ಘೋಷಿಸಿದರು. ಉಮೇಶ್ ಮತ್ತು ಅಶೋಕ್ 8 ಮತಗಳನ್ನು ಪಡೆದರು.
ಅಧ್ಯಕ್ಷರಾಗಿ ಚುನಾಯಿತರಾದ ಸಿ.ಪಿ.ಉಮೇಶ್ ಮದ್ದೂರು ತಾಲೂಕು ಕೊಪ್ಪ ಹೋಬಳಿಯ ಚಿಕ್ಕದೊಡ್ಡಿ(ಗೂಳೂರು ದೊಡ್ಡಿ) ಗ್ರಾಮದವರಾಗಿದ್ದು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ. ಇವರನ್ನು ರಾಜ್ಯ ಸರಕಾರ ಡಿಸಿಸಿ ಬ್ಯಾಂಕ್‍ಗೆ ನಾಮನಿರ್ದೇಶನ ಮಾಡಿತ್ತು. ಉಮೇಶ್ ಅವರ ತಂದೆ ದಿವಂಗತ ಪುಟ್ಟಸ್ವಾಮಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಆಪ್ತರಾಗಿದ್ದರು.
ಬ್ಯಾಂಕ್ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು, ಜೆಡಿಎಸ್ ಬೆಂಬಲಿತ 4 ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಈ ನಡುವೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಅಶ್ವಥ್ ಜೆಡಿಎಸ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಹಾಗಾಗಿ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 7ಕ್ಕೆ ಕುಸಿದು, ಜೆಡಿಎಸ್ ಬೆಂಬಲಿತರ ಸಂಖ್ಯೆ 5ಕ್ಕೆ ಏರಿತ್ತು.
ಕಾಂಗ್ರೆಸ್ ಬಣಕ್ಕೆ ಬ್ಯಾಂಕ್ ಚುಕ್ಕಾಣಿ ತಪ್ಪಿಸಲು ಜೆಡಿಎಸ್ ವರಿಷ್ಠರು ಬಿಜೆಪಿ ವರಿಷ್ಠರ ಜತೆ ಸೇರಿ ತಂತ್ರ ಹೆಣೆದಿದ್ದರು. ಅದರಂತೆ ಒಬ್ಬ ಸರಕಾರದ ನಾಮನಿರ್ದೇಶಿತ, ಇಬ್ಬರು ಅಧಿಕಾರಿಗಳ ಮತ ಸೇರಿ ತಂತ್ರ ಯಶಸ್ವಿಗೊಳಿಸಲು ವೇದಿಕೆ ಸಿದ್ದಗೊಳಿಸಿತ್ತು. ಹೀಗಾಗಿ ಚುನಾವಣೆ ಭಾರೀ ಕುತೂಹಲ ಕೆರಳಿಸಿತ್ತು.