ನಿಗಮದಿಂದ ಅಭಿವೃದ್ಧಿ ಅಸಾಧ್ಯ, ಮೀಸಲಾತಿ ನೀಡಿ: ಬಸವರಾಜ ಹೊರಟ್ಟಿ

Update: 2020-11-17 17:50 GMT

ಬೆಂಗಳೂರು, ನ.17: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಸಮುದಾಯದ ಅಭಿವೃದ್ಧಿ ಅಸಾಧ್ಯವಾಗಿದ್ದು, ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರ, ರಾಜ್ಯದಲ್ಲಿ ಲಿಂಗಾಯತರಿಗೆ ಅಭಿವೃದ್ಧಿ ಪ್ರಾಧಿಕಾರದ ಬದಲಾಗಿ ಮೀಸಲಾತಿ ಕಲ್ಪಿಸಬೇಕು. ರಾಜ್ಯದಲ್ಲಿ ಸುಮಾರು 1.18 ಕೋಟಿ ಜನಸಂಖ್ಯೆ ಹೊಂದಿರುವ ಲಿಂಗಾಯತರು ಈ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಲಿಂಗಾಯತರು ಆರ್ಥಿಕ, ಸಾಮಾಜಿಕವಾಗಿ ಅತೀ ಕನಿಷ್ಠ ಮಟ್ಟದಲ್ಲಿದ್ದಾರೆ. ಇವರ ಸರ್ವತೋಮುಖ ಅಭಿವೃದ್ಧಿಗಾಗಿ ಶೇ.18 ರಷ್ಟು ಮೀಸಲಾತಿ ಸೌಲಭ್ಯವನ್ನು ಸರಕಾರದಿಂದ ಒದಗಿಸಬೇಕು. ಆಗ ಮಾತ್ರ ಇವರು ಅಭಿವೃದ್ಧಿ ಹೊಂದಲು ಸಾಧ್ಯ. ಇಲ್ಲದೇ ಹೋದರೆ ರಾಜ್ಯದ ಲಿಂಗಾಯತರ ಸ್ಥಿತಿ ಗಂಭೀರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೆಲವು ಮಂತ್ರಿಗಳು ಇದೀಗ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿನಂತಿಸಿದ್ದಾರೆ. ಆದರೆ, ಬಹುದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತರಿಗೆ 500 ಕೋಟಿ ರೂ. ಅನುದಾನ ನೀಡಿದರೂ ಲಿಂಗಾಯತ ಅಭಿವೃದ್ಧಿ ನಿಗಮದ ಅನುದಾನ ಯಾವುದಕ್ಕೂ ಸಾಲದು. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News