‘ಆತ್ಮನಿರ್ಭರ ಭಾರತ’ ಅನುದಾನ ಪಡೆಯುವಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ: ಎಸ್.ಟಿ.ಸೋಮಶೇಖರ್

Update: 2020-11-18 14:09 GMT

ಬೆಳಗಾವಿ, ನ.18: ರಾಜ್ಯದ ಸಹಕಾರಿ ಇಲಾಖೆ ದೇಶದಲ್ಲಿಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ ಪ್ಯಾಕೇಜ್ ಮೂಲಕ ರಾಜ್ಯದ ಪಾಲಿನಲ್ಲಿ 670 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಸಹಕಾರ ಇಲಾಖೆಯು ಎಲ್ಲ ರಾಜ್ಯಗಳಿಗಿಂತ ಮೊದಲೇ ಕೇಳಿದ್ದು, ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಕೇಂದ್ರ ಸರಕಾರವು ಮೆಚ್ಚುಗೆ ಸೂಚಿಸಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ನಡೆದ ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು ಎಂದು ತಿಳಿಸಿದರು.

ಕೋವಿಡ್ ಸಂಕಷ್ಟದ ಕಾಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ ಆತ್ಮನಿರ್ಭರ ಯೋಜನೆಯ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್‍ನಲ್ಲಿ ಕರ್ನಾಟಕದ ಪಾಲು 4,750 ಕೋಟಿ ರೂಪಾಯಿ ಬರಬೇಕು. ಅದರಲ್ಲಿ ಕರ್ನಾಟಕವು ಸುಮಾರು 670 ಕೋಟಿ ರೂಪಾಯಿಗಾಗಿ ಮೊದಲು ಪ್ರಸ್ತಾವನೆ ಸಲ್ಲಿಸಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲೇ ಪ್ರಥಮವಾಗಿದೆ ಎಂದು ಸೋಮಶೇಖರ್ ತಿಳಿಸಿದರು.

ಬೆಳಗಾವಿಯಲ್ಲಿ ಶೀಘ್ರ ಮೆಗಾ ಡೈರಿ ಪಾರ್ಕ್: ಈಗಾಗಲೇ ಬೆಳಗಾವಿಯಲ್ಲಿ ಮೆಗಾ ಡೈರಿ ಪಾರ್ಕ್ ಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೇಡಿಕೆ ಸಲ್ಲಿಸಿದ್ದಾರೆ. ಇಲ್ಲಿ 100 ಎಕರೆ ಪ್ರದೇಶದಲ್ಲಿ ಮೆಗಾ ಡೈರಿಯಾದರೆ ಹತ್ತಾರು ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ. ಬೇರೆ ಕಡೆ ಹಾಲನ್ನು ಪೌಡರ್ ಮಾಡುವುದರಿಂದ ಆಗುವ ನಷ್ಟವನ್ನು ತಡೆಯಬಹುದಲ್ಲದೆ, ಇಲ್ಲಿಯೇ ಆ ಕೆಲಸವನ್ನು ಮಾಡುವುದರಿಂದ ಲಾಭವೂ ಆಗುತ್ತದೆ. ಇಲ್ಲಿ 100 ಎಕರೆ ಜಾಗಕ್ಕಾಗಿ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲೆ ಆ ಕೆಲಸಕ್ಕೆ ಚಾಲನೆ ನೀಡಲಾಗುವುದು. ಸರಕಾರದಲ್ಲಿರುವ 30 ಎಕರೆ ಜಮೀನನ್ನು ಶೀಘ್ರವೇ ಕೆಎಂಎಫ್‍ಗೆ ನೀಡುತ್ತೇವೆ ಎಂದು ಅವರು ಹೇಳಿದರು.

ಕೆಎಂಫ್‍ನಿಂದ ದಿನಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹ ಗುರಿ: ಕೆಎಂಎಫ್‍ನಿಂದ ಪ್ರತಿ ದಿನ 90 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು 1 ಕೋಟಿ ಲೀಟರ್ ಗೆ ಹೆಚ್ಚಿಸಲಾಗುವುದು. ಅಲ್ಲದೆ, ಪ್ರತಿ ಲೀಟರ್ ಹಾಲಿಗೆ 5 ರೂಪಾಯಿಯಂತೆ ರೈತರಿಗೆ ಪ್ರೋತ್ಸಾಹ ಧನದಂತೆ ಮುಖ್ಯಮಂತ್ರಿ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಸೋಮಶೇಖರ್ ತಿಳಿಸಿದರು.

15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ: ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್‍ಗಳ ಮೂಲಕ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರಕಾರ ತೀರ್ಮಾನ ಮಾಡಿತ್ತು. ಕೋವಿಡ್‍ನ ಕಷ್ಟದ ಪರಿಸ್ಥಿತಿಯಲ್ಲೂ ನಾವು ರೈತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್‍ಗಳ ಮುಖಾಂತರ ಸಾಲ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಕಳೆದ ಬಾರಿ 13,500 ಕೋಟಿ ರೂ.ಸಾಲವನ್ನು ನೀಡಲಾಗಿತ್ತು. ಈ ಬಾರಿ 15,300 ಕೋಟಿ ರೂ.ಗುರಿಯನ್ನು ಹಾಕಿಕೊಂಡಿದ್ದು, ಈಗಾಗಲೇ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ. ಶೀಘ್ರದಲ್ಲಿ ನಾವು ಹಾಕಿಕೊಂಡಿರುವ ಗುರಿಯನ್ನು ಮುಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸೋಮಶೇಖರ್, ಸಹಕಾರ ಕ್ಷೇತ್ರದಲ್ಲಿ ಕೋಟ್ಯಂತರ ಜನ ಠೇವಣಿ ಇಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಉದ್ಯೋಗ ಕೊಡಲಾಗಿದೆ. ಕೋಟ್ಯಂತರ ಜನರಿಗೆ ಸಾಲ ಸೌಲಭ್ಯವನ್ನು ನೀಡಿ ಆರ್ಥಿಕವಾಗಿ ಸಬಲರಾಗುವಂತೆ ಮಾಡುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಬಹಳ ದೊಡ್ಡದಿದೆ ಎಂದರು.

ಆರ್ಥಿಕ ಸ್ಪಂದನ ಮೂಲಕ ಎಲ್ಲರಿಗೂ ಸಾಲ-ಸೌಲಭ್ಯ: ಆತ್ಮನಿರ್ಭರ ಭಾರತ ಯೋಜನೆಯಡಿ ರಾಜ್ಯ ಸರಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,600 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯಾರಿಗೂ ಕೋವಿಡ್ ಸಂಕಷ್ಟದಿಂದ ಸಮಸ್ಯೆಯಾಗಬಾರದು. ಹೀಗಾಗಿ ಎಲ್ಲರಿಗೂ ಸಾಲ ಸಿಗುವಂತೆ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‍ಗಳ ಮುಖಾಂತರ ಮಾಡಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.

ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ಹಾಗೂ ಎಪಿಎಂಸಿಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನ ವಾರಿಯರ್ಸ್‍ಗಳಾದ 42600 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ.ಗಳಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಅವರು ತಿಳಿಸಿದರು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೆಎಂಎಫ್‍ನಲ್ಲಿ ಅನೇಕ ಬದಲಾವಣೆ ತಂದಿದ್ದು, ಅವರು ಅಧಿಕಾರ ವಹಿಸಿಕೊಂಡಾಗ 79 ಹಾಲಿನ ಉತ್ಪನ್ನಗಳನ್ನು ಕೆಎಂಎಫ್ ತಯಾರಿಸುತ್ತಿತ್ತು. ಈಗ 140ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದು ಅವರ ಬದ್ಧತೆ ತೋರಿಸುತ್ತದೆ. ಇನ್ನು ಜೊಲ್ಲೆ ದಂಪತಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ 11 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯನ್ನು ಇವರು ಸ್ವಂತ ಖರ್ಚಿನಲ್ಲಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಸೋಮಶೇಖರ್ ತಿಳಿಸಿದರು.

ಕೆಎಂಎಫ್ ವತಿಯಿಂದ ಲಾಕ್‍ಡೌನ್ ಸಂದರ್ಭದಲ್ಲಿ ರೈತರು ಹಾಲು ಮಾರಾಟ ಮಾಡಲು ಸಾಧ್ಯವಾಗದೆ ಚರಂಡಿಗೆ ಚೆಲ್ಲಿದ ಘಟನೆ ನಡೆದಾಗ ಮುಖ್ಯಮಂತ್ರಿ ಇದಕ್ಕೆ ಪರಿಹಾರ ಸೂಚಿಸಿದರು. ಯಾವ ರೈತನೂ ಹಾಲನ್ನು ಚರಂಡಿಗೆ ಚೆಲ್ಲುವಂತಾಗಬಾರದು, ನಷ್ಟವಾಗಬಾರದು ಎಂಬ ಉದ್ದೇಶದಿಂದ ಸುಮಾರ 2 ಕೋಟಿ 11 ಲಕ್ಷ ಲೀಟರ್ ಹಾಲನ್ನು ರಾಜ್ಯಾದ್ಯಂತ ಉಚಿತವಾಗಿ ಹಂಚುವ ಕಾರ್ಯಕ್ರಮವನ್ನು ಕೆಎಂಎಫ್ ಮೂಲಕ ಮಾಡಿದರು. ಸುಮಾರು 79 ಕೋಟಿ ರೂಪಾಯಿ ಅನುದಾನವನ್ನು ಕೆಎಂಎಫ್‍ಗೆ ಮುಖ್ಯಮಂತ್ರಿ ನೀಡಿದರು ಎಂದು ಸೋಮಶೇಖರ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಾವೆಲ್ಲರೂ ಹೊಂದಿಕೊಂಡು ಜೊತೆಯಾಗಿ ಹೋಗುವುದು ಸಹಕಾರಿ ಕ್ಷೇತ್ರವಾಗಿದೆ. ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಂದು ಹೆಜ್ಜೆಯಲ್ಲಿಯೂ ನಾವು ಹೊಂದಿಕೊಂಡು ಹೋಗಲೇಬೇಕು. ಇದು ಸಹಕಾರಿ ತತ್ವವನ್ನು ಸಾರುತ್ತದೆ. ಈಗ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಕೆಲಸವನ್ನು ಸಹಕಾರ ಸಚಿವ ಸೋಮಶೇಖರ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿ ಜಿಲ್ಲೆಯ ಶಾಸಕರು, ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News