ಡಿ.7ರಿಂದ 15ರವರೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ

Update: 2020-11-18 11:55 GMT

ಬೆಂಗಳೂರು, ನ. 18: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 15ರ ವರೆಗೆ ಒಟ್ಟು ಏಳು ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದ ಬದಲಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಡಿಸೆಂಬರ್ 7ರಿಂದ 15ರ ವರೆಗೆ ಏಳು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ಸಾಮಾನ್ಯವಾಗಿ ಚಳಿಗಾಲದ ಅಧಿವೇಶನ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆಸುವುದು ವಾಡಿಕೆ. ಆದರೆ, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಅಧಿವೇಶನವನ್ನೇ ನಡೆಸಲಿಲ್ಲ. 2019ರಲ್ಲಿ 'ಪ್ರವಾಹ' ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಧಿವೇಶನವನ್ನು ನಡೆಸಲಾಯಿತು. 2020ನೆ ಸಾಲಿನಲ್ಲಿಯೂ ಮಾರಕ ಕೋವಿಡ್-19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೆ ವಿಧಾನ ಮಂಡಲ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ. 

ಪ್ರವಾಹ, ಕೋವಿಡ್-19, ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಸರಕಾರದ ಆಡಳಿತ ವೈಫಲ್ಯ ಸೇರಿದಂತೆ ಇನ್ನಿತರ ವಿಚಾರಗಳು ಈ ಬಾರಿಯ ವಿಧಾನ ಮಂಡಲ ಅಧಿವೇಶದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News