ರಾಜ್ಯದ 31ನೇ ಜಿಲ್ಲೆಯಾಗಿ 'ವಿಜಯನಗರ': ಸಚಿವ ಸಂಪುಟ ತಾತ್ವಿಕ ಒಪ್ಪಿಗೆ

Update: 2020-11-18 12:48 GMT

ಬೆಂಗಳೂರು, ನ.18: ಬಳ್ಳಾರಿ ಜಿಲ್ಲೆಯಲ್ಲಿದ್ದ ಹೊಸಪೇಟೆ(ವಿಜಯನಗರ) ತಾಲೂಕನ್ನು ನೂತನ 'ವಿಜಯನಗರ ಜಿಲ್ಲೆ'ಯನ್ನಾಗಿ ಘೋಷಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ, ವಿಜಯನಗರ ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಸಂಬಂಧ ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆ ಮಾಡಲಾಗಿದೆ ಎಂದರು.

ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಬಹುದಿನಗಳಿಂದ ಆ ಭಾಗದ ಜನ ಪ್ರತಿನಿಧಿಗಳು ಹಾಗೂ ಸ್ಥಳೀಯರು ಹೋರಾಟ ನಡೆಸಿದ್ದರು. ಆದರೆ, ಇದಕ್ಕೆ ಬಳ್ಳಾರಿ ಜಿಲ್ಲೆಯ ಕೆಲ ಶಾಸಕರು ಹಾಗೂ ಹಲವರಿಂದ ವಿರೋಧವು ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ಸೋಮಶೇಖರ ರೆಡ್ಡಿ ಮಧ್ಯೆ ಬಹಿರಂಗ ಜಟಾಪಟಿಯೂ ನಡೆದಿತ್ತು. ಇದೀಗ ವಿಜಯನಗರ ನೂತನ ಜಿಲ್ಲೆ ರಚನೆಗೆ ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಮಾಡಿದ್ದು, ರಾಜ್ಯದಲ್ಲಿ ಅಧಿಕೃತವಾಗಿ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರಲಿದೆ.

ನೂತನ ವಿಜಯನಗರ ಜಿಲ್ಲೆಗೆ ಯಾವ ಯಾವ ತಾಲೂಕುಗಳನ್ನು ಸೇರ್ಪಡೆ ಮಾಡಬೇಕು,ಜಿಲ್ಲೆಯ ಬೌಗೋಳಿಕ ವಿಸ್ತೀರ್ಣವೂ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದ ಸಚಿವ ಮಾಧುಸ್ವಾಮಿ, ಶೀಘ್ರದಲ್ಲೆ ವಿಜಯನಗರ ನೂತನ ಜಿಲ್ಲೆ ರಚನೆಗೆ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ ಎಂದರು.

ರಜೆ ಪ್ರಕಟ: 2021ನೆ ಸಾಲಿನಲ್ಲಿ 21 ಸಾರ್ವತ್ರಿಕ ರಜೆ ಮತ್ತು 19 ನಿರ್ಬಂಧಿತ ರಜೆಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಅನುಮತಿ ಇಲ್ಲದೆ ಸರಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲು ನಿಯಮಾವಳಿ ತಿದ್ದುಪಡಿ ಮಾಡಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪ್ರಾಧಿಕಾರದ ಬದಲು ನಿಗಮ: ರಾಜ್ಯದಲ್ಲಿರುವ ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಾಧಿಕಾರ ರಚನೆ ಮಾಡಬೇಕಾದರೆ ಕಾನೂನು ಮಾಡಬೇಕು. ಆದರೆ, ನಿಗಮಕ್ಕೆ ಸರಕಾರವೇ ನಿರ್ಧಾರ ಕೈಗೊಳ್ಳಬಹುದು. ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಸಮುದಾಯದ ಅಭಿವೃದ್ದಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿನ ಪ್ರವಾಹ ಪೀಡಿತ ಜಿಲ್ಲೆಗಳಿಗೆ 1 ಸಾವಿರ ಕೋಟಿ ರೂ.ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದ ಅವರು, ಕೃಷ್ಣಾ ಜಲಭಾಗ್ಯ ನಿಗಮ, ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸಾಲ ಪಡೆಯಲು ಘಟನೋತ್ತರ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಹೊಸಪೇಟೆ ನಗರದಲ್ಲಿ 13 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ 28 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆಯಾ ನಗರ ಸ್ಥಳೀಯ ಸಂಸ್ಥೆಗಳು ಮೇಲ್ಕಂಡ ವೆಚ್ಚವನ್ನು ಭರಿಸಲಿವೆ ಎಂದು ಅವರು ತಿಳಿಸಿದರು.

ಮೇಲ್ದರ್ಜೆಗೆ: ದಕ್ಷಿಣ ಕನ್ನಡ ಜಿಲ್ಲೆಯ ಮನಬೆಟ್ಟು, ಕಿನ್ನಿಗೋಳಿ, ಕಟೀಲು ಗ್ರಾಮ ಪಂಚಾಯತ್ ಗಳನ್ನು ಕಟೀಲು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಜತೆಗೆ ದಾವಣಗೆರೆ ಜಿಲ್ಲೆಯ ಹರಿಹರ ನಗರ ಸಭೆ ವ್ಯಾಪ್ತಿಗೆ ಗುತ್ತಲು ಮತ್ತು ಬಂಕಾಪುರ ಸೇರ್ಪಡೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

'ವಿಜಯನಗರ ಜಿಲ್ಲೆಯಾಗಬೇಕೆಂಬುದು ಆ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಈ ಕ್ಷೇತ್ರವನ್ನು ಜಿಲ್ಲೆಯಾಗಿ ಮಾಡಿರುವುದು ಐತಿಹಾಸಿಕ ತೀರ್ಮಾನ. ಹೊಸಪೇಟೆ(ವಿಜಯನಗರ) ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ತೀರ್ಮಾನದಿಂದ ಸರಕಾರ ಐತಿಹಾಸಿಕ ನಿರ್ಧಾರ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೂತನ ವಿಜಯನಗರ ಜಿಲ್ಲೆ ರಚನೆ ಮಾಡಲಾಗಿದೆ'

-ಆನಂದ್ ಸಿಂಗ್, ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News