ನ್ಯಾಯಾಲಯಕ್ಕೆ 10 ಕೋಟಿ ರೂ. ದಂಡ ಪಾವತಿಸಿದ ವಿ.ಕೆ.ಶಶಿಕಲಾ

Update: 2020-11-18 13:05 GMT

ಬೆಂಗಳೂರು, ನ.18: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ನ್ಯಾಯಾಲಯದ ಆದೇಶದಂತೆ 10 ಕೋಟಿ ರೂ.ದಂಡ ಪಾವತಿಸಿದ್ದಾರೆ.

ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ತಮ್ಮ ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಪಾದಿಸಿದ ಆರೋಪವಿತ್ತು. ಶಶಿಕಲಾ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರಿಸಲಾಗಿದ್ದು ಕಳೆದ 3 ವರ್ಷ 8 ತಿಂಗಳಿನಿಂದ ಅವರು ಅಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ಬುಧವಾರ ಅವರು 10 ಕೋಟಿ ರೂ.ಗಳ ದಂಡವನ್ನು ಪಾವತಿಸಿದ್ದು, ದಂಡದ ಮೊತ್ತವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಕಚೇರಿಗೆ ಸಲ್ಲಿಸಲಾಗಿತ್ತು, ಆಕ್ಸಿಸ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್‍ಗೆ ಸೇರಿದ ಎರಡು ಡಿಮ್ಯಾಂಡ್ ಡ್ರಾಫ್ಟ್ ಗಳಲ್ಲಿ ತುಂಬಿ ನ್ಯಾಯಾಲಯಕ್ಕೆ ನೀಡಲಾಗಿತ್ತು.

ಶಶಿಕಲಾ ಅವರ ಪರ ವಕೀಲ ರಾಜಾ ಸೆಂತೂರ್ ಪಾಂಡ್ಯನ್ ಈ ಬಗ್ಗೆ ವಿವರ ನೀಡಿದ್ದು, ದಂಡ ಸಂದಾಯವಾದ ಬಳಿಕ 2021ರ ಜ.27ರಂದು ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆದಾಯಕ್ಕೆ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ, ಶಶಿಕಲಾ ಅವರಲ್ಲದೆ ಇಳವರಸಿ ಹಾಗೂ ಸುಧಾಕರನ್ ಸಹ ಆರೋಪಿಗಳಾಗಿದ್ದು ಆರೋಪ ಸಾಬೀತಾದ ಕಾರಣ 2017 ರ ಫೆ. 15ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕೆಲ್ ಕುನ್ಹ ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆ, ಜಯಲಲಿತಾಗೆ 100 ಕೋಟಿ ರೂ., ಉಳಿದ ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದರು. ವಿ.ಕೆ.ಶಶಿಕಲಾ ಅವರು ತಮಿಳುನಾಡಿನಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕೊಂಡಿದ್ದರು. ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆಯಾಗುತ್ತಿರುವ ವಿಚಾರ ತಮಿಳುನಾಡು ರಾಜಕೀಯದಲ್ಲಿ ಸಂಚಲನ ತಂದಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News