ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ?: ಸಿಎಂ ಯಡಿಯೂರಪ್ಪ ಹೇಳಿದ್ದು ಹೀಗೆ...
ಹೊಸದಿಲ್ಲಿ, ನ.18: ರಾಜ್ಯ ಸರಕಾರದ ಸಚಿವ ಸಂಪುಟವನ್ನು ವಿಸ್ತರಣೆ ಮಾಡಬೇಕೋ ಅಥವಾ ಪುನರ್ ರಚನೆ ಮಾಡಬೇಕೋ ಎಂಬುದರ ಕುರಿತು ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನದಂತೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿನ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆ.ಪಿ.ನಡ್ಡಾ ಜೊತೆ ಉತ್ತಮ ಚರ್ಚೆಯಾಗಿದೆ. ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಸಚಿವ ಸಂಪುಟವನ್ನು ವಿಸ್ತರಣೆ ಮಾಡಲು ಅವಕಾಶ ಕೊಡಬೇಕೆಂದು ಕೇಳಿದ್ದೇನೆ. ಅಲ್ಲದೆ, ನಾನು ಸಿದ್ಧಪಡಿಸಿರುವ ಸಚಿವರ ಪಟ್ಟಿಯನ್ನು ಅವರಿಗೆ ನೀಡಿದ್ದೇನೆ. ಎರಡು, ಮೂರು ದಿನಗಳ ಕಾಲಾವಕಾಶ ಬೇಕೆಂದು ಹೇಳಿದ್ದಾರೆ. ಮುಂದೆ ಅವರು ನೀಡುವ ನಿರ್ದೇಶನದಂತೆ ಸಚಿವ ಸಂಪುಟವನ್ನು ವಿಸ್ತರಣೆ ಮಾಡಬೇಕೋ ಅಥವಾ ಪುನರ್ ರಚನೆ ಮಾಡಬೇಕೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಬಿಜೆಪಿ ಪಕ್ಷದ ಸಾರಥ್ಯ ವಹಿಸಿಕೊಂಡ ಬಳಿಕ ಜೆ.ಪಿ.ನಡ್ಡಾ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅದರಂತೆ, ಮುಂದಿನ ತಿಂಗಳು ಅವರು ಕರ್ನಾಟಕಕ್ಕೂ ಭೇಟಿ ನೀಡಲಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಮತ್ತೊಂದೆಡೆ ಬಿಜೆಪಿ ಜನರ ಮನಸ್ಸಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿ ಬೇರೆ ನಾಯಕತ್ವವಿಲ್ಲ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಅವರು ಸ್ಪರ್ಧಿಸಿ, ಇನ್ನು ಐದು ವರ್ಷಗಳ ಪ್ರಧಾನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಅಮಿತ್ ಶಾ ಭೇಟಿಯಿಲ್ಲ: ಪೂರ್ವನಿಗದಿತ ಕಾರ್ಯಕ್ರಮದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಮಾತುಕತೆ ನಡೆಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಬೇಕಿತ್ತು. ಆದರೆ, ನಡ್ಡಾ ಭೇಟಿ ಬಳಿಕ ಯಡಿಯೂರಪ್ಪ ಬೆಂಗಳೂರಿಗೆ ಹಿಂದಿರುಗಿದರು.
ಜೆ.ಪಿ.ನಡ್ಡಾ ಜೊತೆ ನಡೆದ ಚರ್ಚೆ ವೇಳೆ ಸಂಪುಟ ಪುನರ್ ರಚನೆಗೆ ಮುಖ್ಯಮಂತ್ರಿ ಒಲವು ತೋರಿರುವುದಾಗಿ ತಿಳಿದು ಬಂದಿದೆ. ಎಂಟಿಬಿ ನಾಗರಾಜ್, ಮುನಿರತ್ನ, ಸಿ.ಪಿ.ಯೋಗೀಶ್ವರ್, ಎಚ್.ವಿಶ್ವನಾಥ್, ಆರ್.ಶಂಕರ್, ಅರವಿಂದ ಲಿಂಬಾವಳಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.