×
Ad

ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು: ಲಾಕ್‍ಔಟ್-ಪ್ರತಿಭಟನೆ ನಿಷೇಧಿಸಿ ರಾಜ್ಯ ಸರಕಾರ ಆದೇಶ

Update: 2020-11-18 20:58 IST

ಬೆಂಗಳೂರು, ನ. 18: ರಾಮನಗರ ಜಿಲ್ಲೆಯ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆ ನಡುವಿನ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ, ಆಡಳಿತ ಮಂಡಳಿತ ಲಾಕ್‍ಔಟ್(ಬೀಗಮುದ್ರೆ) ಮತ್ತು ಕಾರ್ಮಿಕರ ಮುಷ್ಕರವನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಬುಧವಾರ ಕಾರ್ಮಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಾಜಶೇಖರ್ ಕತ್ರಿ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಕೈಗಾರಿಕಾ ವಿವಾದ ಕಾಯ್ದೆ 1947ರ ಕಲಂ 10(3)ರ ಅಡಿಯಲ್ಲಿನ ಪ್ರದತ್ತವಾದ ಆಧಿಕಾರವನ್ನು ಚಲಾಯಿಸಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಎಂಪ್ಲಾಯಿಸ್ ಯೂನಿಯನ್‍ ಕೈಗೊಂಡಿರುವ ಮುಷ್ಕರವನ್ನು ನಿಷೇಧಿಸಿದೆ.

ಇದೇ ವೇಳೆ ಕಾರ್ಖಾನೆಯ ಆಡಳಿತ ಮಂಡಳಿ ನ.10ರಂದು ಘೋಷಿಸಿರುವ ಲಾಕ್‍ಔಟ್(ಬೀಗಮುದ್ರೆ) ಅನ್ನು ನಿಷೇಧಿಸಿದ್ದು, ನಾಳೆ(ನ.19)ರಿಂದ ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಬೇಕು ಎಂದು ಆಡಳಿತ ಮಂಡಳಿ ಮತ್ತು ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಆದರೆ, ಈ ಬಗ್ಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

11ನೆ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಹೋರಾಟ: ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿ ದಿಢೀರ್ ಘೋಷಿಸಿರುವ ಲಾಕ್‍ಔಟ್ ತೆರವು, ಆಡಳಿತ ಮಂಡಳಿಯ ಒತ್ತಡ ಮತ್ತು ಕಿರುಕುಳ ಖಂಡಿಸಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಎಂಪ್ಲಾಯಿಸ್ ಯೂನಿಯನ್ ನ.9ರಿಂದ ಆರಂಭಿಸಿರುವ ಪ್ರತಿಭಟನೆ 10ದಿನ ಪೂರೈಸಿದ್ದು, 11ನೆ ದಿನಕ್ಕೆ ಕಾಲಿಟ್ಟಿದೆ.

ಕಾರ್ಮಿಕರ ಹೋರಾಟಕ್ಕೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸೇರಿದಂತೆ ಸ್ಥಳೀಯ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದ್ದು, ಕಾರ್ಖಾನೆ ಆಡಳಿತ ಮಂಡಳಿ ಲಾಕ್‍ಔಟ್ ತೆರವು ಮಾಡಬೇಕು. ಕಾರ್ಮಿಕರಿಗೆ ಒತ್ತಡ ಹೇರುವುದು ಮತ್ತು ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಕಾರ್ಮಿಕರೊಂದಿಗೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರಕಾರ ಕಾರ್ಖಾನೆ ಲಾಕ್‍ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಯನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಪ್ರಕಟಿಸಲಿದ್ದೇವೆ. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಒತ್ತಡ ತಂತ್ರ ಮತ್ತು ಅಮಾನವೀಯ ಕಿರುಕುಳ ನಿಲ್ಲಿಸದಿದ್ದರೆ ಹೋರಾಟ ಕೈಬಿಡುವ ಪ್ರಶ್ನೆ ಉದ್ಬವಿಸುವುದಿಲ್ಲ'

-ಗಂಗಾಧರ್, ಜಂಟಿ ಕಾರ್ಯದರ್ಶಿ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಎಂಪ್ಲಾಯಿಸ್ ಯೂನಿಯನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News