ವಿಧಾನಪರಿಷತ್ ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಕಣ್ಣು !
ಬೆಂಗಳೂರು, ನ.18: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮತ್ತಷ್ಟು ಬಿರುಕು ಕಾಣಿಸಿಕೊಂಡಿದ್ದು, ಅದರ ನಡುವೆಯೇ ಮುಂದಿನ ಅಧಿವೇಶನದಲ್ಲಿ ವಿಧಾನಪರಿಷತ್ ಸಭಾಪತಿ ಸ್ಥಾನವನ್ನು ಕಸಿದುಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿದ್ದರು. ಅದಲ್ಲದೇ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಹಿಡಿದು ವಿಧಾನಪರಿಷತ್‍ವರೆಗೂ ಹಂತ ಹಂತವಾಗಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿವೆ.
ಪ್ರಸ್ತುತ ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್‍ನಿಂದ ಸದಸ್ಯರಾಗಿರುವ ಪ್ರತಾಪ್ ಚಂದ್ರಶೆಟ್ಟಿ ಸಭಾಪತಿಯಾಗಿದ್ದಾರೆ. ಇತ್ತೀಚಿಗೆ ಪರಿಷತ್‍ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆ ಮೂಲಕ ಪರಿಷತ್‍ನಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 31 ಸ್ಥಾನಗಳನ್ನು ಹೊಂದಿದ್ದು, ಒಬ್ಬರು ಪಕ್ಷೇತರ ಸದಸ್ಯ ಬಿಜೆಪಿ ಪರವಾಗಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್ 29 ಹಾಗೂ ಜೆಡಿಎಸ್ 14 ಸದಸ್ಯರನ್ನು ಹೊಂದಿದೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳು ಬದಲಾಗುತ್ತಿದ್ದು, ಜೆಡಿಎಸ್ ಬಿಜೆಪಿಗೆ ಹತ್ತಿರವಾಗುತ್ತಿದೆ. ಆದುದರಿಂದಾಗಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‍ನಿಂದ ಬಿಜೆಪಿ ಕಸಿದುಕೊಳ್ಳಲು ಚಿಂತನೆ ನಡೆಸಿದ್ದು, ಮುಂದಿನ ಅಧಿವೇಶನದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಬಿಜೆಪಿ ಮುಂದಾಗಿದೆ. ಈ ಸಂಭಂಧ ಶೀಘ್ರವೇ ಮಂಡನಾ ಪ್ರಕ್ರಿಯೆ ನಡೆಸಲಾಗುವುದು ಎಂದು ಬಿಜೆಪಿಯ ಮೂಲಗಳು ಮಾಹಿತಿ ನೀಡಿವೆ.
ಸಭಾಪತಿ ಸ್ಥಾನಕ್ಕೆ ವಿಧಾನಪರಿಷತ್‍ನಲ್ಲಿ ಮತದಾನ ನಡೆದರೆ ನಿರ್ಣಯದ ವಿರುದ್ಧವಾಗಿ 3 ಮತಗಳು ಸಿಗುವುದು ಅನುಮಾನ.ಆ ಕಾರಣಕ್ಕೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗವೇ ಅಧಿಕವಾಗಿರುತ್ತದೆ. ಡಿಸೆಂಬರ್ ನಲ್ಲಿ ನಡೆಯಲಿರುವ ಅಧಿವೇಶನದಲ್ಲಿಯೇ ಈ ಎಲ್ಲ ಪ್ರಕ್ರಿಯೆಗಳು ನಡೆಯಲಿವೆ.
ಯಾರಿಗೆ ಸಭಾಪತಿ ಸ್ಥಾನ ಸಾಧ್ಯತೆ?: ವಿಧಾನಪರಿಷತ್ ಸದಸ್ಯರಾಗಿ ಸಚಿವರಾಗಿರುವ ಹಾಗೂ ಪರಿಷತ್ ಸಭಾ ನಾಯಕರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಹಾಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಹ ಪರಿಷತ್‍ನಿಂದಲೇ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಪರಿಷತ್‍ನಿಂದ ಒಬ್ಬರಿಗಾದರೂ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕೆಂಬ ನಿಯಮ ಪಾಲಿಸಿದಂತಾಗುತ್ತದೆ. ಕೋಟಾರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದರೆ ಸಂಪುಟದಲ್ಲಿ ಒಂದು ಸ್ಥಾನ ಹೆಚ್ಚಾಗಿ ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ದಕ್ಷಿಣ ಕನ್ನಡಕ್ಕೂ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ ಎನ್ನಲಾಗಿದೆ.