ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದು ಎಷ್ಟು ಸೂಕ್ತ: ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನೆ

Update: 2020-11-18 16:02 GMT

ಬೆಂಗಳೂರು, ನ. 18: ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರಕಾರ ಸಿದ್ಧವಿದೆ. ಆದರೆ, ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ಮುಂದೂಡಬೇಕು ಎಂದು ಮನವಿ ಮಾಡಿವೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಎಷ್ಟು ಸೂಕ್ತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಚುನಾವಣೆ ಮುಂದೂಡುವುದು ಸರಿಯಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಗ್ರಾಮೀಣ ಪ್ರದೇಶದ ಚುನಾವಣೆಯಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಹೋಲಿಕೆ ಸರಿಯಲ್ಲ. ಗ್ರಾಮ ಪಂಚಾಯತ್ಯಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದರು.

ಹೊಸದಿಲ್ಲಿ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲೂ ಕೊರೋನ ಸೋಂಕಿನ ಮೂರನೆ ಅಲೆ ಸೃಷ್ಟಿ ಆಗಬಹುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದೊಂದು ಗ್ರಾಮದಲ್ಲಿ ನಾಲ್ಕೈದು ಜನ ಸ್ಪರ್ಧೆ ಮಾಡುವುದರಿಂದ ಜನಸಂದಣಿ ಹೆಚ್ಚಾಗುತ್ತದೆ. ಗ್ರಾ.ಪಂ.ಚುನಾವಣೆಯಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಎಂದ ಅವರು, ಹೈಕೋರ್ಟ್ ಮೂರು ವಾರಗಳಲ್ಲಿ ಚುನಾವಣೆಗೆ ದಿನಾಂಕ ನಿಗದಿಪಡಿಸಬೇಕೆಂದು ಸ್ಪಷ್ಟವಾಗಿ ಆದೇಶ ನೀಡಿದೆ ಎಂದರು.

ಚುನಾವಣಾ ಆಯೋಗಕ್ಕೆ ಬೇಕಾಗಿರುವ ಸವಲತ್ತುಗಳನ್ನು ನೀಡಬೇಕೆಂದು ಸರಕಾರಕ್ಕೆ ನಿರ್ದೇಶನ ನೀಡಿದೆ. ಹೀಗಾಗಿ ನಾವೂ ಏನೂ ಮಾಡದಂತಹ ಸ್ಥಿತಿಯಲ್ಲಿದ್ದೇವೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೆ ಮಾತ್ರ ಚುನಾವಣೆಗೆ ತಡೆಯಾಜ್ಞೆ ತರಬಹುದು. ಅದನ್ನು ಹೊರತುಪಡಿಸಿದರೆ ಸರಕಾರ ಚುನಾವಣೆಯನ್ನೇ ನಡೆಸಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿದೆ ಎಂದರು.

ನಾವು ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಬೇಕೆಂಬ ಭ್ರಮೆಯಲ್ಲಿ ಇಲ್ಲ. ಇದು ಸೂಕ್ತವಾದ ಸಮಯವಲ್ಲ ಎಂಬುದೇ ನಮ್ಮ ಮನವಿ. ಚುನಾವಣಾ ಆಯೋಗ ಯಾವಾಗ ಬೇಕಾದರೂ ದಿನಾಂಕ ಘೋಷಣೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ನಮ್ಮದೇನು ತಕರಾರು ಇಲ್ಲ ಎಂದರು.

ರಾಜ್ಯದಲ್ಲಿರುವ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ, ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಲಾಗಿದೆ. ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿರುವ ಗೊಂಡ ಜನಾಂಗಕ್ಕೆ ಎಸ್ಟಿ ಸಮುದಾಯದ ಸವಲತ್ತುಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿನ ಕುರುಬ ಸಮುದಾಯಕ್ಕೂ ನೀಡಬೇಕು ಎಂಬುದು ನಮ್ಮ ಆಗ್ರಹ ಎಂದು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News