ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ಬಸ್‍ಗಳ ಸಂಚಾರ: ಕೆಎಸ್ಆರ್‌ಟಿಸಿ

Update: 2020-11-18 17:06 GMT

ಬೆಂಗಳೂರು, ನ.18: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ಈಗಾಗಲೇ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳೂ ಸೇರಿದಂತೆ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳನ್ನು ಓಡಿಸಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ಸೋಂಕು ತಡೆಗೆ ಹೇರಿದ್ದ ಲಾಕ್‍ಡೌನ್ ತೆರವಾದ ಬಳಿಕ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್‍ಗಳ ಸಂಚಾರ ಯಥಾಸ್ಥಿತಿಗೆ ಮರಳುತ್ತಿದೆ. ಆದರೆ, ಬಸ್‍ಗಳಲ್ಲಿ ನಿರೀಕ್ಷಿತ ಸಂಖ್ಯೆಯ ಪ್ರಯಾಣಿಕರು ಸಂಚರಿಸುತ್ತಿಲ್ಲ. ಆದಾಗ್ಯೂ, ಅಧಿಕ ಸಂಖ್ಯೆಯಲ್ಲಿ ಸಾಮಾನ್ಯ ಬಸ್‍ಗಳನ್ನು ಆಚರಣೆ ಮಾಡಲಾಗುತ್ತಿದೆ.

ಕೆಎಸ್ಆರ್‌ಟಿಸಿ ವ್ಯಾಪ್ತಿಯಲ್ಲಿನ ಎಲ್ಲ ಜಿಲ್ಲೆ, ತಾಲೂಕು, ಗ್ರಾಮೀಣ ಪ್ರದೇಶಗಳಿಗೆ ಬಸ್ ಸೇವೆ ಒದಗಿಸಲಾಗಿದೆ. 8250 ಬಸ್ ಗಳಲ್ಲಿ1500 ರಾಜಹಂಸ, ವೋಲ್ವೊ, ಮಲ್ಟಿ ಆಕ್ಸೆಲ್ ವಾಹನಗಳಿದ್ದು, ಇದರಲ್ಲಿ ಕೇವಲ 250 ಬಸ್‍ಗಳಷ್ಟೇ ಸಂಚಾರ ಮಾಡಲಾಗುತ್ತಿದೆ.

ವೇಗದೂತ ಮತ್ತು ಸಾಮಾನ್ಯ ಬಸ್‍ಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಒಟ್ಟು 30 ಲಕ್ಷ ಕಿ.ಮೀ. ಪೈಕಿ ಪ್ರತಿದಿನ 22 ಲಕ್ಷ ಕಿ.ಮೀ. ಮಾರ್ಗದಲ್ಲಿ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ವರ್ಗದವರ ಬೇಡಿಕೆಗೆ ತಕ್ಕಂತೆ ಬಸ್ ಸೇವೆ ಒದಗಿಸಲು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಡಿಪೋ ಮ್ಯಾನೇಜರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ.

ನಗರ ಮತ್ತು ಹೊರವಲಯದ ಎಲ್ಲ ಮಾರ್ಗಗಳಲ್ಲಿ ಬಸ್‍ಗಳನ್ನು ಆಚರಣೆ ಮಾಡಲಾಗುತ್ತಿದೆ. 750 ವೋಲ್ವೊ ಬಸ್‍ಗಳ ಪೈಕಿ ಕೇವಲ 50 ಬಸ್ ಮಾತ್ರ ಕಾರ್ಯಾಚರಣೆಗೊಳ್ಳುತ್ತಿವೆ. ಉಳಿದೆಲ್ಲಾ ಸಾಮಾನ್ಯ ಬಸ್‍ಗಳು ಎಂದಿನಂತೆ ಪ್ರಯಾಣಿಕರ ಸೇವೆಗೆ ಬಳಕೆಯಾಗುತ್ತಿವೆ. ಈವರೆಗೆ ಬಸ್‍ಗಳ ಕೊರತೆ ಬಗ್ಗೆ ದೂರುಗಳು ಬಂದಿಲ್ಲ. ಈಗಷ್ಟೇ ಪದವಿ ತರಗತಿಗಳು ಆರಂಭವಾಗಿದ್ದು, ಬೇಡಿಕೆ ಆಧರಿಸಿ ಸೇವೆ ಒದಗಿಸಲು ಸಿದ್ಧವಾಗಿದ್ದೇವೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News